ಹಟ್ಟಿಯಲ್ಲಿ ರಾಜ್ಯ ಮಹಿಳಾ ಒಕ್ಕೂಟ, ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ಹಾಗೂ ಓಬವ್ವ ಮಹಾ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಹಟ್ಟಿಚಿನ್ನದಗಣಿ: ಪಟ್ಟಣದ ಹೊರವಲಯದಲ್ಲಿ ಯುವತಿ ಜ್ಯೋತಿ ಸಾವಿನ ಪ್ರಕರಣದ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ರಾಜ್ಯ ಮಹಿಳಾ ಒಕ್ಕೂಟ, ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ಹಾಗೂ ಓಬವ್ವ ಮಹಾಸಂಘದ ಪದಾಧಿಕಾರಿಗಳು ಶುಕ್ರವಾರ ಹಟ್ಟಿ ಕ್ಯಾಂಪ್‌ನ ಬಸ್ ನಿಲ್ದಾಣ ಬಳಿ ಪ್ರತಿಭಟನೆ ನಡೆಸಿದರು.
ರಾಜ್ಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮೋಕ್ಷಮ್ಮ ಮಾತನಾಡಿ, ಒಬ್ಬ ಯುವತಿ ಪ್ರೀತಿ ನಂಬಿ ಪ್ರಿಯಕರನ ಮನೆಗೆ ಹೋಗಿದ್ದಾಳೆ. ಮದುವೆಗೆ ನಿರಾಕರಿಸಿದ ಬಳಿಕ ಅನುಮಾನಾಸ್ಪದವಾಗಿ ಜ್ಯೋತಿ ಸಾವಿಗೀಡಾಗಿದ್ದು, ಕುಟುಂಬಸ್ಥರು ಕೊಲೆ ಎಂದು ಪ್ರತಿಭಟನೆ ನಡೆಸಿದ್ದರು. ಆದರೆ, ಆರೋಪಿಗಳನ್ನು ರಕ್ಷಿಸುವ ರೀತಿಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದು ಮಹಿಳೆಯರ ಮೇಲಿನ ಅಪರಾಧಗಳಿಗೆ ಪ್ರೋತ್ಸಾಹ ನೀಡುವಂತಾಗಿದೆ. ಕೂಡಲೇ ಆರೋಪಿ ಜ್ಞಾನಮೂರ್ತಿ ಹಾಗೂ ಆತನ ಕುಟುಂಬದವರನ್ನು ಬಂಧಿಸಿ ವಿಚಾರಣೆ ನಡೆಸಬೇಕು. ಒಂದು ವೇಳೆ ನಿರ್ಲಕ್ಷಿಸಿದರೆ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಬಸವರಾಜಗೆ ಮನವಿ ಸಲ್ಲಿಸಿದರು. ಪ್ರಮುಖರಾದ ವಿದ್ಯಾ ಪಾಟೀಲ್, ವಿರುಪಮ್ಮ, ಶಾಂಭವಿ, ಅಕ್ಕಮ್ಮ, ಸುಮಲತಾ, ಈರಮ್ಮ, ಪಾರ್ವತಿ, ಯಲ್ಲಮ್ಮ, ತಿಪ್ಪಮ್ಮ, ಮರಿಯಮ್ಮ, ಮೇರಿಪುಷ್ಪ, ಸಂತೋಷಮ್ಮ, ಅಮೃತಮ್ಮ, ಅಂಚಲಮ್ಮ, ದೇವಮ್ಮ, ಜಯ್ಯಮ್ಮ, ಗೌರಮ್ಮ, ಹುಲಿಗೆಮ್ಮ, ಗುರುರಾಜ, ಖಾಜಾಸಾಬ್, ಹನುಮೇಶ, ಗುಂಡಪ್ಪ ಇತರರಿದ್ದರು.