ಗುಡದನಾಳ ಗ್ರಾಮದ ರೈತ ಅಮರಣ್ಣ ಹೊಲದಲ್ಲಿ ಕುರಿ-ಮೇಕೆಗಳು ಸೂರ್ಯಕಾಂತಿ ಬೆಳೆ ತಿನ್ನುತ್ತಿರುವುದು.
ಹಟ್ಟಿಚಿನ್ನದಗಣಿ: ಮುಂಗಾರು ಮಳೆ ಕೊರತೆಯಿಂದ ಗುಡದನಾಳ ಗ್ರಾಮದ ರೈತನೊಬ್ಬ ಹತ್ತು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೂರ್ಯಕಾಂತಿ ಮೊಳಕೆಯೊಡೆಯದ ಕಾರಣ ಕುರಿ-ಮೇಕೆಗಳಿಗೆ ಮೇಯಲು ಬಿಟ್ಟಿದ್ದಾರೆ.
ಗುಡದನಾಳ ಗ್ರಾಮದ ರೈತ ಅಮರಣ್ಣ ಅವರು ಎರಡು ತಿಂಗಳ ಹಿಂದೆ ಮಳೆ ನಂಬಿ ಹತ್ತು ಎಕರೆ ಜಮೀನಿನಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಆದರೆ, ಮಳೆ ಬಾರದಿರುವುದ ಹಾಗೂ ಬಿತ್ತಿದ ಬೀಜಗಳು ಸರಿಯಾಗಿ ಮೊಳಕೆಯೊಡೆಯದ ಕಾರಣ ಬೆಳೆ ನೆಲ ಬಿಟ್ಟು ಮೇಲೆದ್ದಿಲ್ಲ. ಬಿತ್ತನೆ, ಗೊಬ್ಬರ, ಉಳುಮೆ ಸೇರಿದಂತೆ ಲಕ್ಷಾಂತರ ರೂ. ವೆಚ್ಚ ಮಾಡಿದರೂ ನಿರೀಕ್ಷಿತ ಫಲ ಸಿಗದೆ ರೈತ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮುಂದೆ ಬೆಳೆ ಉಳಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾದ ಬಳಿಕ ಹೊಲದಲ್ಲಿದ್ದ ಸೂರ್ಯಕಾಂತಿ ಬೆಳೆಯನ್ನು ಕುರಿ-ಮೇಕೆಗಳಿಗೆ ಮೇಯಿಸಿ, ನಂತರ ಟ್ರ್ಯಾಕ್ಟರ್ ಮೂಲಕ ಹೊಲ ಹರಗಿಸಿದ್ದಾರೆ.
ಆಷಾಢ ಮಾಸ ಆರಂಭವಾದರೂ ಆಕಾಶದಲ್ಲಿ ಮೋಡಗಳು ಕಾಣಿಸಿಕೊಂಡು ಮಾಯವಾಗುತ್ತಿವೆ. ಮಳೆಯ ಸುಳಿವೇ ಇಲ್ಲದ ಕಾರಣ ಮುಂಗಾರು ಬೆಳೆಗಳು ಒಣಗಿ ನೆಲಕಚ್ಚುತ್ತಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ. ಒಂದು ಕಡೆ ಬರದ ಬವಣೆ, ಮತ್ತೊಂದು ಕಡೆ ಕಳಪೆ ಬೀಜಗಳ ಆರೋಪ ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ.
"
ಹತ್ತು ಎಕರೆ ಜಮೀನಿನಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದೆವು. ಮಳೆ ಕೊರತೆಯಿಂದ ಬೀಜವೂ ಸರಿಯಾಗಿ ಮೊಳಕೆಯೊಡೆಯಲಿಲ್ಲ. ಬೆಳೆ ಬರುವ ಲಕ್ಷಣ ಕಾಣದ ಕಾರಣ ಕುರಿ-ಮೇಕೆಗಳಿಗೆ ಮೇಯಿಸಿ ಹೊಲ ಹರಗಿಸಿದ್ದೇವೆ. ಮುಂಗಾರು ಮಳೆ ಇಲ್ಲದೆ ದೊಡ್ಡ ನಷ್ಟವಾಗಿದೆ.
— ರಾಮಣ್ಣ ರುದ್ರಾಕ್ಷಿ ಗುಡದನಾಳ ಗ್ರಾಮದ ಕುರಿಗಾಹಿ