ಅರಕೇರಾದಲ್ಲಿ ಶ್ರೀ ಸೂಗೂರೇಶ್ವರ ಜಾತ್ರೋತ್ಸವದಲ್ಲಿ ಭಕ್ತರು ಗುರುವಾರ ಶಸ್ತ್ರ ಹಾಕಿಸಿಕೊಂಡರು. 
ರಾಯಚೂರು

ಅರಕೇರಾದ ಸೂಗೂರೇಶ್ವರ ಜಾತ್ರೆ ಸಂಪನ್ನ

ಪ್ರಮುಖ ಮುಖ್ಯಾಂಶಗಳು

  • ಹುಸಿ ಚೆಂಡಿನ ಹೊಡೆದಾಟ ಬಲು ಜೋರು
ಅರಕೇರಾ: ಪಟ್ಟಣದ ಶ್ರೀ ಸೂಗೂರೇಶ್ವರ ಜಾತ್ರೋತ್ಸವ ನಿಮಿತ್ತ ಗುರುವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಕಡುಬಿನ ಕಾಳಗ ಜರುಗಿತು.
ಹಿರೇಮಠದ ಶ್ರೀ ಚಂದ್ರಶೇಖರಯ್ಯ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಪುರವಂತರ ವಡವು-ವಚನದ ಮೇಳ ಪಾಲ್ಗೊಂಡಿತ್ತು. ಭಕ್ತರು ನಂದಿಕೋಲು ಸೇವೆ ಮಾಡಿದರು.
ನಂತರ ಗಂಡಿನ ಕಡೆಯವರು ಮತ್ತು ಹೆಣ್ಣಿನ ಕಡೆಯವರೆಂದು ಎರಡು ಗುಂಪುಗಳನ್ನು ಮಾಡಿ ಆಡಿದ ಹುಸಿ ಚೆಂಡಿನ ಹೊಡೆದಾಟ ನೋಡುಗರ ಕಣ್ಮನ ಸೆಳೆಯಿತು. ಭಕ್ತರು ಬೆಳಗ್ಗೆ 6 ಗಂಟೆಗೆ ಅರಕೇರಾ ಬಸವಣ್ಣನ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿ, ಹುಸಿ ಚೆಂಡಿನ ತಯಾರಿಗಾಗಿ ಎಲೆಗಳನ್ನು (ತಪ್ಪಲಗಳು) ತಂದಿದ್ದರು. ಕಟ್ಟಿದ ಸೂಡುಗಳಿಂದ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆಯಿತು. ಬಳಿಕ ದೇವಸ್ಥಾನದಲ್ಲಿ ಮಹಾ ಮಂಗಳಾರತಿಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ಜಾತ್ರೆ ಕಾರಣ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಕಾಯಿ, ಕರ್ಪೂರ, ನೈವೇದ್ಯ ಸೂಗೂರೇಶ್ವರನಿಗೆ ಸಮರ್ಪಿಸಿ ಭಕ್ತಿ ಮೆರೆದರು. ನಾಲೈದು ದಿನ ವಿಜೃಂಭಣೆಯಿಂದ ಜರುಗುವ ಜಾತ್ರೆಗೆ ದೇವಸ್ಥಾನ ವಿವಿಧ ಬಗೆಯ ಹೂಗಳು ಹಾಗೂ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ದೇವಸ್ಥಾನ ಕಂಗೊಳಿಸಿತು. ಕಡುಬಿನ ಕಾಳಗದಲ್ಲಿ ಪುರವಂತಿಗೆಯವರಿಂದ ಅನೇಕ ಭಕ್ತರು ಶಸ್ತ್ರಗಳನ್ನು ಹಾಕಿಸಿಕೊಂಡರು.