ಮಾನ್ವಿಯಲ್ಲಿ ಶಿಶಿಕ್ಷು ಮೇಳಕ್ಕೆ ಬಿಇಒ ಚಂದ್ರಶೇಖರ ದೊಡ್ಡಮನಿ ಚಾಲನೆ ನೀಡಿದರು. ತಾಲೂಕು ನೌಕರರ ಸಂಘದ ಅಧ್ಯಕ್ಷ ಸುರೇಶ್ ಕುರ್ಡಿ, ಪ್ರಾಚಾರ್ಯರಾದ ರುದ್ರಗೌಡ ಪಾಟೀಲ್, ತಿಪ್ಪಣ್ಣ ಹೊಸಮನಿ, ಮುಕ್ಕಣ್ಣ, ಗಂಗಪ್ಪ, ಶರಣಪ್ಪ ಹಿಪ್ಪಲದಿನ್ನಿ ಇತರರಿದ್ದರು. 
ರಾಯಚೂರು

ವಿದ್ಯಾರ್ಥಿಗಳು ಕೌಶಲ ಕಲಿಕೆಗೆ ಆದ್ಯತೆ ನೀಡಲಿ

ಶಾಮಸುಂದರ್ ಕೊಪ್ಪಳಕರ್
ಮಾನ್ವಿ: ವಿದ್ಯಾರ್ಥಿಗಳಿಗೆ ಕೌಶಲ ಅತ್ಯವಶ್ಯ. ಕೌಶಲಾಭಿವೃದ್ಧಿಯ ಮಹತ್ವವನ್ನು ಸರ್ಕಾರ ಮನಗಂಡು, ಪ್ರೌಢಶಾಲಾ ಹಂತದಲ್ಲಿಯೇ ಎನ್‌ಎಸ್‌ಕ್ಯೂಎಫ್ ಪರಿಚಯಿಸಲಾಗಿದೆ ಎಂದು ಬಿಇಒ ಚಂದ್ರಶೇಖರ ದೊಡ್ಡಮನಿ ಹೇಳಿದರು.
ಪಟ್ಟಣದ ಬಸವ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ 2025-26ನೇ ಸಾಲಿನ ಪಿಎಂಎನ್‌ಎಎಂ ಯೋಜನೆಯಡಿ ಹಮ್ಮಿಕೊಂಡಿದ್ದ ಶಿಶಿಕ್ಷು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಸರ್ಕಾರಿ ನೌಕರಿಯನ್ನೇ ಅವಲಂಬಿಸದೆ, ವಿವಿಧ ಕೌಶಲಗಳನ್ನು ಮೈಗೂಡಿಸಿ ಕೊಂಡು ಸ್ವಾವಲಂಬಿಗಳಾಗಿ ಬದುಕಬೇಕು. ಗ್ರಾಮೀಣ ವಿದ್ಯಾರ್ಥಿಗಳು ಐಟಿಐನಂತಹ ವೃತ್ತಿ ಶಿಕ್ಷಣದ ಕಡೆ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಅವರ ಆರ್ಥಿಕ ಸ್ಥಿತಿಗತಿಯ ಸುಧಾರಣೆಗೂ ಹಾಗೂ ಉತ್ತಮ ಜೀವನ ನಿರ್ವಹಣೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ತಾಲೂಕು ನೌಕರರ ಸಂಘದ ಅಧ್ಯಕ್ಷ ಸುರೇಶ್ ಕುರ್ಡಿ ಮಾತನಾಡಿ, ಈ ಹಿಂದೆ ಜಿಲ್ಲೆಗೆ ಒಂದೇ ಸರ್ಕಾರಿ ಐಟಿಐ ಕಾಲೇಜು ಇತ್ತು. ಇಂದು ಸರ್ಕಾರ ಪ್ರತಿ ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿಯೂ ಕಾಲೇಜುಗಳನ್ನು ಪ್ರಾರಂಭಿಸಿರುವುದು ವಿದ್ಯಾರ್ಥಿಗಳಿಗೆ ವರವಾಗಿದೆ ಎಂದರು.
ಶಿಶಿಕ್ಷು ಮೇಳದಲ್ಲಿ ಜೆಎಸ್‌ಡಬ್ಲುೃ ತೋರಣಗಲ್ಲು, ಹೋಂಡಾ ಕಂಪನಿ (ಬೆಂಗಳೂರು), ಇ2ಇ ಕನ್ಸಲ್ಟೆನ್ಸಿ (ರಾಯಚೂರು) ಸೇರಿದಂತೆ ವಿವಿಧ ಉದ್ಯಮಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಮೇಳಕ್ಕೆ ಆಗಮಿಸಿದ ವಿವಿಧ ಕಂಪನಿಗಳ ಪ್ರತಿನಿಧಿಗಳು ವಿದ್ಯಾರ್ಥಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಮೇಳದಲ್ಲಿ ಸುಮಾರು 60 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರಗಳನ್ನು ನೀಡಲಾಯಿತು.