ಮನರೇಗಾ ಯೋಜನೆ ಮರುಜಾರಿಗೆ ಒತ್ತಾಯಿಸಿ ಲಿಂಗಸುಗೂರಿನಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಎಪಿಎಂಸಿ ಅಧ್ಯಕ್ಷ ಅಮರೇಶ ಹಿರೇ ಹೆಸರೂರು, ಪ್ರಚಾರ ಸಮಿತಿ ಅಧ್ಯಕ್ಷ ಮಹ್ಮದ ರಫಿ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ದೇಸಾಯಿ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ವೆಂಕಟೇಶ ಗುತ್ತೇದಾರ ಇತರರಿದ್ದರು.
- ಕೆಪಿಸಿಸಿ ಉಪಾಧ್ಯಕ್ಷ ಡಿ.ಎಸ್.ಹೂಲಗೇರಿ ಹೇಳಿಕೆ
- ಲಿಂಗಸುಗೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ
ಲಿಂಗಸುಗೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮರುಜಾರಿಗೆ ಒತ್ತಾಯಿಸಿ ಗ್ರಾಪಂ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು.
ಪಟ್ಟಣದ ಸಹಾಯಕ ಆಯುಕ್ತರ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಮಾಜಿ ಪ್ರಧಾನಿ ಮನಮೋಹನಸಿಂಗ್ ಜಾರಿಗೆ ತಂದಿದ್ದ ಮನರೇಗಾ ಯೋಜನೆಯಡಿ ಕೇಂದ್ರ ಸರ್ಕಾರ ಶೇ.90 ಹಾಗೂ ರಾಜ್ಯ ಸರ್ಕಾರ ಶೇ.10 ಮಾತ್ರ ಅನುದಾನ ಒದಗಿಸುತ್ತಿತ್ತು.
ಆದರೆ, ಈಗಿನ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಯೋಜನೆಯಡಿ ಕೇಂದ್ರ ಸರ್ಕಾರ ಶೇ.60, ರಾಜ್ಯ ಸರ್ಕಾರ ಶೇ. 40 ಅನುದಾನ ನೀಡಬೇಕೆಂದಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಹೊರೆಯಾಗಲಿದೆ. ಮೊದಲಿದ್ದ ಮನರೇಗಾ ಯೋಜನೆ ಮರು ಜಾರಿಗೆ ತರಲು ರಾಜ್ಯ ಸರ್ಕಾರ ನಿಲುವು ತಾಳಿದೆ. ಆದ್ದರಿಂದ ಗ್ರಾಪಂ ಮಾಜಿ ಅಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಗ್ರಾಪಂ ಮಟ್ಟದಲ್ಲಿ 200 ರಿಂದ 300 ಜನ ಸೇರಿ ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದರು.
ನಂತರ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಸೊಪ್ಪಿಮಠ, ಪ್ರಮುಖರಾದ ಡಾ.ಶಿವಬಸಪ್ಪ, ಎಸ್.ಆರ್.ರಸೂಲ್, ಶರಣಬಸವ ಮೇಟಿ, ಗಂಗಮ್ಮ ಕಟ್ಟಿಮನಿ, ಶಿವಣ್ಣ ನಾಯಕ ಕೋಠಾ, ಸಂಜೀವಪ್ಪ ಹುನಕುಂಟಿ, ಖಾಜಾಹುಸೇನ್, ಅಮರೇಶ ಮಡ್ಡಿ, ಬಾಬಾ ಹಟ್ಟಿ, ನಾಗರೆಡ್ಡೆಪ್ಪ ನಗನೂರು, ಹುಲಗಪ್ಪ ನಾಯಕ, ಜೀವನ್ ಬಾಳೇಗೌಡ, ಗದ್ದೆನಗೌಡ, ಆಲಂಪಾಷಾ ಹಟ್ಟಿ ಇತರರಿದ್ದರು.