ಸಿಂಧನೂರಿನಲ್ಲಿ ಜೆಸ್ಕಾಂ ಎಇಇ ಶ್ರೀನಿವಾಸ ಯಾದವಗೆ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಸಮಿತಿ ಮನವಿ ಸಲ್ಲಿಸಿತು.
- ಸಿಂಧನೂರಿನಲ್ಲಿ ಜೆಸ್ಕಾಂ ಅಧಿಕಾರಿಗೆ ರೈತ ಸಂಘ ಮನವಿ
- ಟಾಟಾ ಕಂಪನಿ ಅರ್ಜಿ ತಿರಸ್ಕರಿಸಲು ಆಗ್ರಹ
ಸಿಂಧನೂರು: ವಿದ್ಯುತ್ ಕ್ಷೇತ್ರವನ್ನು ಟಾಟಾ ಕಂಪನಿಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿಯಿಂದ ಜೆಸ್ಕಾಂ ಎಇಇ ಶ್ರೀನಿವಾಸ ಯಾದವಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರವು ವಿದ್ಯುತ್ ತಿದ್ದುಪಡಿ ಮಸೂದೆಗಳನ್ನು ಮಂಡಿಸುವ ಮೂಲಕ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಯತ್ನಿಸುತ್ತಿದೆ. ವಿದ್ಯುತ್ ತಿದ್ದುಪಡಿ ಮಸೂದೆ ಮಂಡಿಸುವ ಮೂಲಕ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದನ್ನು ಪರಿಶೀಲಿಸಲು ಸಂಸದೀಯ ಸ್ಥಾಯಿ ಸಮಿತಿಗೆ ಒಪ್ಪಿಸಲಾಗಿತ್ತು. ಜತೆಗೆ ಪ್ರಿ-ಪೇಡ್ ಸ್ಮಾರ್ಟ್ ಮೀಟರ್‌ಗಳ ಬಳಕೆಗೆ ಸಂಬಂಧಿಸಿ ಒಕ್ಕೂಟ ಸರ್ಕಾರವು ಗ್ರಾಹಕರ ಹಕ್ಕುಗಳ ಕರಡು ವಿದ್ಯುತ್ ತಿದ್ದುಪಡಿ ನಿಯಮಗಳನ್ನು 2023ರ ಮಾರ್ಚ್‌ನಲ್ಲಿ ಪ್ರಕಟಿಸಿದೆ.
ಆದರೆ ಸ್ಥಾಯಿ ಸಮಿತಿಯ ವರದಿ ಪಡೆದು ಅಂಗೀಕರಿಸುವ ಬದಲಿಗೆ ಕೇಂದ್ರ ಇಂಧನ ಇಲಾಖೆಯು ಕರಡು ವಿದ್ಯುತ್ ತಿದ್ದುಪಡಿ ಮಸೂದೆ 2025 ಎಂದು ಪರಿಷ್ಕರಿಸಲಾದ ಚೌಕಟ್ಟನ್ನು ಮಂಡಿಸಿದೆ.
ಇವೆಲ್ಲವೂ ಮೂಲತಃ ವಿದ್ಯುತ್ ಕ್ಷೇತ್ರವನ್ನು ಪೂರ್ಣವಾಗಿ ಖಾಸಗಿ ಕಂಪನಿಗಳಿಗೆ ಒಪ್ಪಿಸುವ ಪ್ರಯತ್ನಗಳಾಗಿವೆ. ಅದಕ್ಕಾಗಿ ಟಾಟಾ ಪವರ್ ಕಂಪನಿಯ ಅರ್ಜಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ತಿರಸ್ಕರಿಸಬೇಕೆಂದು ರೈತ ಸಂಘಟನೆ ಒತ್ತಾಯಿಸಿದೆ.
ಸಂಘದ ತಾಲೂಕು ಅಧ್ಯಕ್ಷ ಎಚ್.ವಿರೂಪಾಕ್ಷಗೌಡ, ಕಾರ್ಯದರ್ಶಿ ಶ್ರೀನಿವಾಸರಡ್ಡಿ, ಪದಾಧಿಕಾರಿಗಳಾದ ಬಸವರಾಜ ಮಾಪಾ ಮಾಡಸಿರವಾರ, ಬಸಪ್ಪ ಪೂಜಾರಿ, ಶೇಖರಡ್ಡಿ ಭಾವಿಕಟ್ಟೆ, ನಾಗೇಶಗೌಡ ಪೊಪಾ, ಹನುಮೇಶ ಕೆಂಗಲ್, ಪ್ರಮುಖರಾದ ನರಸಣ್ಣ ಕೆಂಗಲ್, ಗೋಪಾಲಕೃಷ್ಣ, ಬಿ.ಲಿಂಗಪ್ಪ, ಮಹೇಶ, ಶರಬಣ್ಣ ನಾಗಲಾಪುರ, ಬಸಪ್ಪ ಮೂಲೆಮನಿ, ಹನುಮಂತ ಹಂಚಿನಾಳ, ಕೆ.ನರೇಂದ್ರಬಾಬು, ಬಿ. ಬಸವರಾಜ ಹಾಗೂ ಬಸವಂತರಾಯಗೌಡ ಕಲ್ಲೂರು ಇದ್ದರು.