ಸಂಘದ ಜಿಲ್ಲಾಧ್ಯಕ್ಷ ಯೇಸುಮಿತ್ರ
ರಾಯಚೂರು ಕರ್ನಾಟಕ ಪ್ರದೇಶದ ಕಾಂಗ್ರೆಸ್ ಸಮಿತಿಯಿಂದ ಕಲ್ಯಾಣ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ಸಮಾವೇಶವನ್ನು ಜೂ.6 ರಂದು ಬೆಳಗ್ಗೆ 10 ಗಂಟೆಗೆ ನಗರದ ಪ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜನೆ ಮಾಡಲಾಗಿದೆಂದು ಸಂಘದ ಜಿಲ್ಲಾಧ್ಯಕ್ಷ ಯೇಸುಮಿತ್ರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶವನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೆಪಿಸಿಸಿ ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಈ.ಸಿ.ರಂಗಸ್ವಾಮಿ ವಹಿಕೊಳ್ಳಲಿದ್ದಾರೆ. ಅಂದು ಬೆಳಗ್ಗೆ 9 ಗಂಟೆಗೆ ನಗರದ ಶೆಟ್ಟಿಭಾವಿ ವೃತ್ತದಿಂದ ರಂಗಮಂದಿ ರದವರಗೆ ಬೈಕ್ ರ‌್ಯಾಲಿ ನಡೆಸಲಾಗುತ್ತದೆ. ಸಮಾವೇಶದಲ್ಲಿ ಕಲ್ಯಾಣ ಕರ್ನಾಟಕದ ಪ್ರಮುಖ 10 ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ ಎಂದರು.
ರಾಜ್ಯ ಕಾರ್ಯಾಧ್ಯಕ್ಷ ಅತೀಕ್ ಪಟೇಲ್ ಮಾತನಾಡಿ, 2014 ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಮನಮೋಹನಸಿಂಗ್ ಅವರು ಬೀದಿ ಬದಿ ವ್ಯಾಪಾರಿಗಳ ರಕ್ಷಣೆಗೆ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಿದ್ದರು. ಆದರೆ ಇಂದಿಗೂ ಬೀದಿಬದಿ ವ್ಯಾಪಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ವ್ಯಾಪಾರಿಗಳಿಗೆ ಇರುವ ಯೋಜನೆ ಸಮರ್ಪಕ ಜಾರಿ, ಸಮಸ್ಯೆಗಳು ಪರಿಹಾರ ಒದಗಿಸುವದು ಒಳಗೊಂಡಂತೆ 10 ಪ್ರಮುಖ ಬೇಡಿಕೆಗಳಿಗೆ ಆಗ್ರಹಿಸಿ ಸಮಾವೇಶ ನಡೆಸಲಾಗುತ್ತದೆ. ಏಳು ಜಿಲ್ಲೆಗಳ ಸರಿಸುಮಾರು 3 ಸಾವಿರ ಬೀದಿಬದಿ ವ್ಯಾಪಾರಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀನಿವಾಸಲು, ಶಂಶುದ್ದೀನ್ ಇದ್ದರು.