ದೇವದುರ್ಗದ ಅಕ್ಷರ ದಾಸೋಹ ಯೋಜನೆ ಕಚೇರಿ ಉದ್ಯೋಗಿ ಅಮರೇಶಗೆ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಮನವಿ ಸಲ್ಲಿಸಿತು.
ದೇವದುರ್ಗ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಿ ಪೌಷ್ಟಿಕ ಆಹಾರ ಪೂರೈಕೆ ಮಾಡುತ್ತಿರುವ ಬಿಸಿಯೂಟ ಯೋಜನೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದೆಂದು ಒತ್ತಾಯಿಸಿ ಪಟ್ಟಣದಲ್ಲಿ ಅಕ್ಷರ ದಾಸೋಹ ಯೋಜನೆ ಕಚೇರಿ ಉದ್ಯೋಗಿ ಅಮರೇಶಗೆ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಮಂಗಳವಾರ ಮನವಿ ಸಲ್ಲಿಸಿತು.
ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಳದ ಜತೆಗೆ ಅಪೌಷ್ಟಿಕತೆ ನಿವಾರಿಸಲು ಅಕ್ಷರದಾಸೋಹ ಯೋಜನೆ ಶ್ರಮಿಸುತ್ತಿದೆ. 2008ರಲ್ಲಿ ಯೋಜನೆ ಆರಂಭ ಮಾಡಿದ್ದು 25ವರ್ಷಗಳಿಂದ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ನೌಕರರು ಶ್ರಮಿಸುತ್ತಿದ್ದಾರೆ. ಆದರೆ, ಆರ್ಥಿಕ ಸಂಕಷ್ಟದ ನಡುವೆ ಕೆಲಸ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಬಿಡಿಗಾಸಿನಲ್ಲಿ ನೌಕರರು ದುಡಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸರ್ಕಾರ ನೌಕರರ ವೇತನ ಏಳು ಸಾವಿರ ರೂ.ಗೆ ಹೆಚ್ಚಿಸಬೇಕು. 6ಗಂಟೆ ಕೆಲಸ ಅವಧಿಗೆ ಸಂಬಂಧಿಸಿದ ಸುತ್ತೋಲೆ ಹೊರಡಿಸಬೇಕು. ಆರೋಗ್ಯ ವಿಮೆ ಜಾರಿ ಮಾಡಬೇಕು. ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಗೆ ವಹಿಸಬೇಕು. ಕೆಲಸದ ಭದ್ರತೆ ಒದಗಿಸಲು ಎಂಡಿಎಂ ಯೋಜನೆ ಅನುದಾನ ಹೆಚ್ಚಿಸಬೇಕು. ಇಸ್ಕಾನ್ ಸೇರಿ ಯಾವುದೇ ಸಂಸ್ಥೆಗೆ ಯೋಜನೆ ಖಾಸಗೀಕರಣ ಮಾಡಬಾರದು.
ನೌಕರರಿಗೆ ಮಾಸಿಕ ಪಿಂಚಣಿ 10 ಸಾವಿರ ರೂ. ಕೊಡಬೇಕು. ನಿವೃತ್ತ ನೌಕರರಿಗೆ ಇಡುಗಂಟು ಜಾರಿ ಮಾಡಬೇಕು. ಸುಸಜ್ಜಿತ ಅಡುಗೆ ಕೋಣೆ ನಿರ್ಮಿಸಬೇಕು. ವರ್ಷದ 12 ತಿಂಗಳು ಕೆಲಸ ಮತ್ತು ಕನಿಷ್ಠ ಕೂಲಿಜಾರಿ ಆಗಬೇಕು. ನಿರ್ಲಕ್ಷೃ ಮಾಡಿದರೆ ಜು.10ರಂದು ಕೆಲಸ ಬಂದ್‌ಮಾಡಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಿಸಿಯೂಟ ಅಡುಗೆ ನೌಕರರಾದ ಮರಿಯಮ್ಮ, ಶ್ರೀಲೇಖಾ, ರೇಣುಕಾ, ಶೋಭಾ ಇದ್ದರು.