ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಗೆ ಕೇಂದ್ರ ವಾಣಿಜ್ಯ ಇಲಾಖೆ ಜಂಟಿ ಕಾರ್ಯದರ್ಶಿ ಉಜ್ವಲ್ ಕುಮಾರ್ ಘೋಷ್ ಭೇಟಿ ನೀಡಿ ಮಾಹಿತಿ ಪಡೆದರು.
ಲಿಂಗಸುಗೂರು: ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ವಿಳಂಬ ಹಾಗೂ ಕ್ರಿಟಿಕಲ್ ಕೇರ್ ಸೆಂಟರ್ ಭೂಮಿಪೂಜೆ ನೆರವೇರಿಸುವ ಕುರಿತು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಕ್ರಮಕೈಗೊಳ್ಳುವುದಾಗಿ ಕೇಂದ್ರ ವಾಣಿಜ್ಯ ಇಲಾಖೆ ಜಂಟಿ ಕಾರ್ಯದರ್ಶಿ ಹಾಗೂ ನೀತಿ ಆಯೋಗದ ಜಿಲ್ಲಾ ಪ್ರಭಾರ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದರು. 16 ವರ್ಷಗಳ ಹಿಂದೆ ಲಿಂಗಸುಗೂರು ಎಸಿಯಾಗಿ ಕೆಲಸ ಮಾಡಿದ್ದೇನೆ. ಈಗ ಸಾರ್ವಜನಿಕ ಆಸ್ಪತ್ರೆ ಬದಲಾಗಿದೆ. ಸಿ.ಟಿ.ಸ್ಕ್ಯಾನ್, ಡಯಾಲಿಸಿಸ್ ಸೌಲಭ್ಯ ಸಿಗುತ್ತಿರುವುದು ಸಂತೋಷವಾಗಿದೆ. ಆಸ್ಪತ್ರೆ ಮೇಲ್ದರ್ಜೆಗೇರಿಸುವುದು ಅಗತ್ಯವಿದೆ. ಆಸ್ಪತ್ರೆಯಲ್ಲಿ ಔಷಧಗಳ ಕೊರತೆ ಸೇರಿದಂತೆ ಹಲವು ಸೌಲಭ್ಯಗಳ ಕುರಿತು ಡಿಸಿ ಜತೆಗಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಸಿ.ಟಿ. ಸ್ಕ್ಯಾನ್, ಡಯಾಲಿಸಿಸ್, ಐಸಿಯು, ಒಳರೋಗಿಗಳ ಘಟಕ ವೀಕ್ಷಿಸಿದರು. ತಾಪಂ ಇಒ ಉಮೇಶ, ಮುಖ್ಯವೈದ್ಯಾಧಿಕಾರಿ ಡಾ. ರುದ್ರಗೌಡ ಪಾಟೀಲ ಇತರರಿದ್ದರು.