ಸಿಂಧನೂರು ತಹಸಿಲ್ ಕಚೇರಿ ಶಿರಸ್ತೇದಾರ್ ಅಂಬಾದಾಸ್ ಅವರಿಗೆ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ತಾಲೂಕು ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಸಿಂಧನೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ನಂತರ ಆ ಸ್ಥಳ ಶುದ್ಧೀಕರಣಗೊಳಿಸಿ ಹೋಮ-ಹವನ ಮಾಡಿರುವುದನ್ನು ಖಂಡಿಸಿ ತಹಸಿಲ್ ಕಚೇರಿ ಶಿರಸ್ತೇದಾರ್ ಅಂಬಾದಾಸ್ ಅವರಿಗೆ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ತಾಲೂಕು ಸಮಿತಿಯಿಂದ ಗುರುವಾರ ಮನವಿ ಸಲ್ಲಿಸಲಾಯಿತು.
ಉತ್ತರಾಖಂಡದಲ್ಲಿ ಆ.8ರಂದು ಮಲ್ಲಿಕಾರ್ಜುನ ಖರ್ಗೆ ಸ್ವಾತಂತ್ರ್ಯಪೂರ್ವ ಭಾಷಣ ಮಾಡಿದ ನಂತರ ಪ್ರಜಾಪ್ರಭುತ್ವ ವಿರೋಧಿಗಳು ಈ ಸ್ಥಳವನ್ನು ಗೋಮೂತ್ರ ಹಾಕಿ ಶುದ್ಧೀಕರಣ ಮಾಡಿ ಹೋಮ-ಹವನ ನಡೆಸಿರುವುದು ನಾಚಿಗೇಡಿನ ವಿಷಯವಾಗಿದೆ. ಭಾರತೀಯರೆಲ್ಲರೂ ಇದನ್ನು ಖಂಡಿಸಬೇಕು. ಇಂಥ ಘಟನೆ ನಡೆದಾಗ ದೇಶಕ್ಕೆ ಸ್ವಾತಂತ್ರ್ಯ ಲಭಿಸಿರುವ ಬಗ್ಗೆ ಅನುಮಾನ ಬರುತ್ತದೆ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಯಿತು.
ಸಿರವಾರ ತಾಲೂಕಿನ ಗ್ರಾಮವೊಂದರಲ್ಲಿ ಯುವತಿ ಶೌಚಗೃಹಕ್ಕೆ ಹೋದಾಗ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿ ಶವವನ್ನು ಬಾವಿಯಲ್ಲಿ ಹಾಕಲಾಗಿದೆ. ಅಪರಾಧಿಗಳಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಲಾಯಿತು. ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಡಾ.ರಾಮಣ್ಣ ಗೋನ್ವಾರ, ಒಕ್ಕೂಟದ ತಾಲೂಕು ಅಧ್ಯಕ್ಷ ವೀರೇಶ ಹಂಚಿನಾಳ ಕೆ., ಪ್ರಧಾನ ಕಾರ್ಯದರ್ಶಿ ವಿರುಪಣ್ಣ ಬೂದಿವಾಳ, ಗೌರವಾಧ್ಯಕ್ಷ ಶರಣಪ್ಪ, ಉಪಾಧ್ಯಕ್ಷ ರಾಜಶೇಖರಪ್ಪ, ಕಾರ್ಯಾಧ್ಯಕ್ಷ ಮೌಲಪ್ಪ, ಉಪಾಧ್ಯಕ್ಷ ಹುಸೇನಪ್ಪ ರಾಗಲಪರ್ವಿ, ಬಿಎಸ್‌ಪಿ ತಾಲೂಕು ಅಧ್ಯಕ್ಷ ಹುಲುಗಪ್ಪ, ಪಂಪಾಪತಿ ಬೂದಿವಾಳ, ಹುಲುಗಪ್ಪ ದೊಡ್ಡಮನಿ, ಪಂಪಾಪತಿ ಇದ್ದರು.