ಎಡೆದೊರೆ ನಾಡು ರಾಯಚೂರು ಉತ್ಸವ ನಿಮಿತ್ತ ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ
ರಾಯಚೂರು: ಎಡೆದೊರೆ ನಾಡು ರಾಯಚೂರು ಉತ್ಸವ ನಿಮಿತ್ತ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ 100ಕ್ಕೂ ಹೆಚ್ಚು ಯುವಕರು ಸ್ಪರ್ಧೆಯಲ್ಲಿ ಒಬ್ಬರಿಗಿಂತ ಒಬ್ಬರು ದೇಹದಾರ್ಢ್ಯ ಪ್ರದರ್ಶನ ಮಾಡಿದರು.
ಜಿಲ್ಲೆಯಲ್ಲಿ ಮೊದಲ ಬಾರಿಗೆ ದೇಹದಾರ್ಢ್ಯ ಸ್ಪರ್ಧೆ ಆಯೋಜನೆ ಮಾಡಲಾಗಿದ್ದರಿಂದ ಅತಿ ಹೆಚ್ಚು ದೇಹದಾರ್ಢ್ಯ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಜಿಮ್ನಲ್ಲಿ ಕಸರತ್ತು ಮಾಡಿ, ದೇಹವನ್ನು ಕಬ್ಬಿಣದಂತೆ ಗಟ್ಟಿಯಾಗಿ ಮಾಡಿಕೊಂಡಿದ್ದ ಯುವಕರು, ವೇದಿಕೆ ಮೇಲೆ ಫಿಟ್ ಆಗಿರುವ ದೇಹದ ಫೋಸ್ ನೀಡಿದರು. ಇವರ ಸಿಕ್ಸ್ ಪ್ಯಾಕ್ ಕಟುಮಸ್ತಾದ ದೇಹ ನೋಡಿದ ಪ್ರೇಕ್ಷಕರು ಚಪ್ಪಾಳೆ, ಸಿಳ್ಳೆ ಹಾಕಿ ಎಂಜಾಯ್ ಮಾಡಿದರು. ಸ್ಪರ್ಧೆ ನೋಡಲು ಯುವಕ ಮತ್ತು ಯುವತಿಯರು ಮಹಿಳೆಯರು ಕಿಕ್ಕಿರಿದು ತುಂಬಿದ್ದರು.
ಪ್ರತಿಯೊಬ್ಬ ಪಟುಗಳು ಕಟುಮಸ್ತಾದ ದೇಹದ ಪಿಟ್‌ನೆಸ್‌ನ ಅನಾವರಣ ಮಾಡಿದರು. ಬೈಸಿಪ್, ಚೇಸ್ತ್, ಥೈಸ್ ಸೇರಿದಂತೆ ವಿವಿಧ ಭಂಗಿಗಳ ಮತ್ತು ಆಯಾಮಗಳ ಪ್ರದರ್ಶನ ನೋಡಿದ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದರು. ಬಾಡಿಬಿಲ್ಡರ್ಸ್ ಆದರೆ ಹಿಂಗೂ ಇರುತ್ತಾರೆಂದು ಕಣ್ಣು ಮುಂದೆಯೇ ಅವರನ್ನು ನೋಡಿದ ನಗರದ ಜನರು ಸಖತ್ ಎಂಜಾಯ್ ಮಾಡಿದರು.
ವಿವಿಧ ಜಿಲ್ಲೆಗಳಿಂದ ಬಂದಿದ್ದ ದೇಹದಾರ್ಢ್ಯ ಪಟುಗಳು ವಿವಿಧ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ವಿಜೇತರಿಗೆ ಪ್ರಶಸ್ತಿ ಮತ್ತು ನಗದು ನೀಡಿ ಗೌರವಿಸಲಾಯಿತು. ಜಿಲ್ಲಾಧಿಕಾರಿ ನಿತೀಶ್ ಕೆ. , ಜಿಪಂ ಸಿಇಒ ಈಶ್ವರ ಕುಮಾರ ಕಾಂದೊ, ಎಡಿಸಿ ಶಿವಾನಂದ ಭಜಂತ್ರಿ, ಎಸಿ ಡಾ.ಹಂಪಣ್ಣ ಸಜ್ಜನ್ ಇತರರಿದ್ದರು.
ಅನೇಕರು ದೇಹದಾರ್ಢ್ಯ ಸ್ಪರ್ಧೆ ಆಯೋಜನೆ ಮಾಡಲು ಒತ್ತಾಯ ಮಾಡಿದ್ದರು. ಅದರಂತೆ ಜಿಲ್ಲಾಡಳಿತ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದು, ಉತ್ಸಾಹದಿಂದ ದೇಹದಾರ್ಢ್ಯ ಪಟುಗಳು ಭಾಗವಹಿಸಿರುವುದು ಸಂತಸ ತಂದಿದೆ.