ಮುದಗಲ್ ಪಟ್ಟಣ ಹೊರವಲಯದಲ್ಲಿ ಆರಂಭವಾಗುತ್ತಿರುವ ಕ್ಲಬ್‌ಗೆ ಅನುಮತಿ ನೀಡದಂತೆ ಆಗ್ರಹಿಸಿ ಪೊಲೀಸ್ ಸಿಬ್ಬಂದಿಗೆ ಮಾನವ ಬಂಧುತ್ವ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು.ವೇದಿಕೆಯ ಅಧ್ಯಕ್ಷ ಸಂಜೀವ್ ಛಲುವಾದಿ, ಮೌನೇಶ ಶಿವನಗುತ್ತಿ, ಎಕ್ಬಾಲ್ ಬೇಗ್ ಉದ್ತಾದ್, ದಾವೂದ್ ನದಾಫ್, ಪಾಷಾ ಇದ್ದರು.
- ಮಾನವ ಬಂಧುತ್ವ ವೇದಿಕೆ ಪದಾಧಿಕಾರಿಗಳು ದೂರು
- ಮುದಗಲ್ ಜೂಜಾಟ ಕ್ಲಬ್ ಅನುಮತಿ ಪರಿಶೀಲಿಸಿ
ಮುದಗಲ್: ಹೊರವಲಯದಲ್ಲಿ ಮನರಂಜನೆ ಉದ್ದೇಶಕ್ಕಾಗಿ ಆರಂಭವಾಗುತ್ತಿರುವ ಕ್ಲಬ್ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮತ್ತು ಆತಂಕ ವ್ಯಕ್ತವಾಗುತ್ತಿದ್ದು, ಕೂಡಲೇ ಸ್ಥಗಿತಗೊಳಿಸಲು ಆಗ್ರಹಿಸಿ ಮಾನವ ಬಂಧುತ್ವ ವೇದಿಕೆ ಗ್ರಾಮ ಘಟಕದ ಪದಾಧಿಕಾರಿಗಳು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.
ಲಿಂಗಸುಗೂರಿನವರು ಎನ್ನಲಾದ ಖಾಸಗಿ ವ್ಯಕ್ತಿಗಳು ಮನರಂಜನೆಗೆಂದು ಕ್ಲಬ್ ಆರಂಭಿಸಲು ಮುಂದಾಗಿದ್ದು, ಇದಕ್ಕಾಗಿ ಡಾಬಾವೊಂದನ್ನು ಖರೀದಿಸಿದ್ದಾರೆ. ಅಲ್ಲಿ ಇಸ್ಪೀಟು, ಮದ್ಯ ಮಾರಾಟ ಹಾಗೂ ಇನ್ನಿತರ ಜೂಜಾಟ ಆಡಿಸುವ ಶಂಕೆ ಇದ್ದು, ಇಂಥ ಕಾನೂನುಬಾಹಿರ ಚಟುವಟಿಕೆಗಳಿಂದ ಇಲ್ಲಿನ ಯುವಜನರ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಈಗಾಗಲೇ ಪಟ್ಟಣದ ಕೆಲವೆಡೆ ಜೂಜಾಟಗಳು ನಡೆಯುತ್ತಿದ್ದು, ಇದಕ್ಕೆ ಬಲಿಯಾದವರ ಕುಟುಂಬಗಳು ಕಣ್ಣೀರು ಹಾಕುತ್ತಿವೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಗಳು ಇಂತಹ ಕ್ಲಬ್‌ಗಳಿಗೆ ಅನುಮತಿ ನೀಡುವ ಮುನ್ನ ಪರಿಶೀಲಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.