ಸಿಂಧನೂರಿನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಹಿರಿಯ ಮೇಲ್ವಿಚಾರಕಿ ಸುನೀತಾಗೆ ಅಂಗನವಾಡಿ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು.
ಸಿಂಧನೂರು: ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ಆರಂಭಿಸುವುದರಿಂದ ಅಂಗನವಾಡಿಗಳಿಗೆ ಸಮಸ್ಯೆಯಾಗಲಿದೆ ಎಂದು ಅಂಗನವಾಡಿ ನೌಕರರ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ ಹೇಳಿದರು.
ನಗರದ ಕೋಟೆ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಿಂಧನೂರು ಮತ್ತು ತುರ್ವಿಹಾಳ ಅಂಗನವಾಡಿ ಕಾರ್ಯಕರ್ತೆಯರ ಸಭೆಯಲ್ಲಿ ಮಾತನಾಡಿದರು.
ಸರ್ಕಾರ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ಕೆಜಿ ಮತ್ತು ಯುಕೆಜಿ ಆರಂಭಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಋತುಚಕ್ರದ ಅವಧಿಯಲ್ಲಿ ಒಂದು ದಿನ ರಜೆ ನೀಡಬೇಕು. ಬಿಎಲ್ಒ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರ್ಯಕರ್ತರಿಗೆ ಕರ್ತವ್ಯದಿಂದ ವಿನಾಯಿತಿ ನೀಡಬೇಕು. ಪ್ರಸ್ತುತ ಅಂಗನವಾಡಿಗಳಿಗೆ ಪೂರೈಸುವ ಆಹಾರ ಧಾನ್ಯಗಳನ್ನು ಪಾಲಕರು ನಿರಾಕರಿಸುತ್ತಿರುವುದರಿಂದ ಸರ್ಕಾರ ಈ ಕುರಿತು ಗಮನ ಹರಿಸಿ ಬದಲಿಸಬೇಕು ಎಂದು ಒತ್ತಾಯಿಸಿದರು.
ಕಳೆದ ಮೂರು ತಿಂಗಳಿನಿಂದ ಗೌರವಧನ ಪಾವತಿಸದ ಕಾರಣ ತೀವ್ರ ತೊಂದರೆಯಾಗಿದೆ. ತಕ್ಷಣ ಗೌರವಧನ ಬಿಡುಗಡೆ ಮಾಡಬೇಕು. ಕೇಂದ್ರಗಳ ಬಾಡಿಗೆ, ತರಕಾರಿ, ಅಡುಗೆ ಅನಿಲ ಹಣ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸಬೇಕ ಎಂದು ಆಗ್ರಹಿಸಿದರು.
ಹಿರಿಯ ಮೇಲ್ವಿಚಾರಕಿ ಸುನೀತಾ ಮಾತನಾಡಿ, ಒಂದು ವಾರದೊಳಗೆ ಗೌರವಧನ ವಿತರಿಸಲಾಗುವುದು. ಅಡುಗೆ ಸಿಲಿಂಡರ್ ಸೇರಿದಂತೆ ಸ್ಥಳೀಯ ಸಮಸ್ಯೆಗಳನ್ನು ಪಹರಿಸಲಾಗುವುದು ಎಂದು ತಿಳಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷೆ ಸುಲೋಚನಾ, ಪ್ರಮುಖರಾದ ಗಿರಿಜಮ್ಮ, ಆದಿಲಕ್ಷ್ಮೀ, ರತ್ನಮ್ಮ, ಸಾವಿತ್ರಿ, ನಾಗರತ್ನಾ ತುರ್ವಿಹಾಳ, ಶಾಂತಾ ಗೊರೇಬಾಳ, ಮೇಲ್ವಿಚಾರಕಿಯರಾದ ಲಕ್ಷ್ಮೀ, ನಿರ್ಮಲಾ ಹಾಗೂ ಡಿ.ಎಚ್.ಕಂಬಳಿ, ಸಂಗಯ್ಯಸ್ವಾಮಿ ಹಿರೇಮಠ, ತಿಪ್ಪಯ್ಯ ಶೆಟ್ಟಿ, ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಬಾಷುಮಿಯಾ, ಸಿಪಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಶೇಖರ ಕ್ಯಾತ್ನಟ್ಟಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಜಗದೀಶ್ ಇತರರಿದ್ದರು.