ಪ್ರಭಾಕರ್ ಪಾಟೀಲ್ ಇಂಗಳದಾಳ್  
ರಾಯಚೂರು

ಮೆಣಸಿನಕಾಯಿ ಮಾರುಕಟ್ಟೆ ಆರಂಭಿಸಿ

ನರೇಶ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಒತ್ತಾಯ
  • ಡಿಸಿ ಕಚೇರಿಗೆ ಮುತ್ತಿಗೆ ಎಚ್ಚರಿಕೆ
ದೇವದುರ್ಗ: ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆದ ರೈತರ ಅನುಕೂಲಕ್ಕಾಗಿ ಜಿಲ್ಲಾಡಳಿತ ರಾಯಚೂರಿನಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಆರಂಭಿಸಬೇಕು. ನಿರ್ಲಕ್ಷಿಸಿದರೆ ರೈತರೊಂದಿಗೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಇಂಗಳದಾಳ್ ಎಚ್ಚರಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇವದುರ್ಗ, ಲಿಂಗಸುಗೂರು, ರಾಯಚೂರು ಗ್ರಾಮೀಣ, ಮಾನ್ವಿ, ಮಸ್ಕಿ ತಾಲೂಕು ಸೇರಿ ಜಿಲ್ಲೆಯ ವಿವಿಧೆಡೆ ರೈತರು ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಆದರೆ ಸೂಕ್ತ ಮಾರುಕಟ್ಟೆ ಇಲ್ಲದೆ ಚಿಲ್ಲಿ ಬೆಳೆಗೆ ಬೆಲೆ ಸಿಗುತ್ತಿಲ್ಲ. ವ್ಯಾಪಾರಿಗಳು, ದಲ್ಲಾಳಿಗಳು ನಿಗದಿ ಮಾಡುವ ಬೆಲೆಗೆ ಮಾರಾಟ ಮಾಡಬೇಕಿದೆ. ಹಲವು ಕಡೆ ಮಾರಾಟದ ನಂತರ ಹಣ ಕೊಡದೆ ಪರಾರಿಯಾಗಿದ್ದು, ರೈತರು ಭಾರಿನಷ್ಟ ಅನುಭವಿಸಿದ್ದಾರೆ ಎಂದರು.
ಒಂದು ಕ್ವಿಂ. ಮೆಣಸಿನಕಾಯಿಗೆ 12-14 ಸಾವಿರ ರೂ. ಬೆಲೆಯಿದ್ದು ರೈತರಿಗೆ ನಷ್ಟ ಉಂಟಾಗಲಿದೆ. ಈ ಹಿಂದೆ ಬೆಳಗಾವಿಯ ವಿಕಾಸ ಸೌಧದ ಮುಂದೆ ರೈತರು ಪ್ರತಿಭಟನೆ ನಡೆಸಿದಾಗ ಸಿಎಂ ಸಿದ್ದರಾಮಯ್ಯ ಮೆಣಸಿನಕಾಯಿ ಮಾರುಕಟ್ಟೆ ತೆರೆಯುವುದಾಗಿ ಭರವಸೆ ನೀಡಿದ್ದರು. ಮಾರುಕಟ್ಟೆ ತೆರೆಯಲು 25ಕೋಟಿ ರೂ. ಮೀಸಲಿಟ್ಟಿದ್ದರು. ಆದರೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ಮಾಡಿ ಅನುದಾನ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಅತಿವೃಷ್ಟಿಯಿಂದ ಬೆಳೆ ನಷ್ಟವಾದ ತಾಲೂಕಿನ ರೈತರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ. ಜಿಲ್ಲೆಯ ವಿವಿಧ ತಾಲೂಕಿನ ರೈತರಿಗೆ 50 ಸಾವಿರ ರೂ.ವರೆಗೆ ಪರಿಹಾರ ಬಂದಿದೆ. ತಾಲೂಕಿನ ರೈತರಿಗೆ 2500-3400 ರೂ. ಬಿಡಿಗಾಸು ನೀಡಿದ್ದಾರೆ. ಅರಕೇರಾ ತಾಲೂಕಿನ ಬಹುತೇಕ ರೈತರಿಗೆ ಪರಿಹಾರವೇ ಬಂದಿಲ್ಲ. ತಹಸೀಲ್ದಾರ್ ನಾಗಮ್ಮ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಸೇರಿ ಕಂದಾಯ ಇಲಾಖೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದ ಕಾರಣ ರೈತರಿಗೆ ಪರಿಹಾರ ದೊರೆತಿಲ್ಲ ಎಂದು ದೂರಿದರು.
ಸರ್ಕಾರ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರಾಯಚೂರಿನ ಹಳೆಯ ಹತ್ತಿ ಮಾರುಕಟ್ಟೆ ಜಾಗದಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಆರಂಭಿಸಬೇಕು. ದೇವದುರ್ಗ ಹಾಗೂ ಅರಕೇರಾ ತಾಲೂಕಿನ ರೈತರಿಗೆ ಬೆಳೆ ಪರಿಹಾರ ಕೊಡಬೇಕು. ನಿರ್ಲಕ್ಷಿಸಿದರೆ ಜನವರಿಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.  ಮುಖಂಡರಾದ ಹಾಜಿ ಮಸ್ತಾನ್, ಹುಸೇನ್ ಬಾಷಾ ಹನುಮಗೌಡ, ತಿಮ್ಮನಗೌಡ ಇದ್ದರು.