ಪ್ರತಾಪಗೌಡ ಪಾಟೀಲ್ 
ರಾಯಚೂರು

ಮಸ್ಕಿಯಿಂದ ಶ್ರೀರಾಮುಲು ಸ್ಪರ್ಧೆ ಸುಳ್ಳು

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿಕೆ
  • ಮಸ್ಕಿ ಕ್ಷೇತ್ರಕ್ಕೆ ನಾನೇ ಬಿಜೆಪಿ ಅಭ್ಯರ್ಥಿ
ಮಸ್ಕಿ: ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರಕ್ಕೆ ಬಿಜೆಪಿಯಿಂದ ನಾನೇ ಅಭ್ಯರ್ಥಿಯಾಗುವೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಕೆಲ ದಿನಗಳಿಂದ ಮಸ್ಕಿ ಕ್ಷೇತ್ರದ ಮತದಾರರು ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಚಟುವಟಿಕೆ ನಡೆದಿದೆ. ಬಿಜೆಪಿ ಹಿರಿಯ ಮುಖಂಡ ಶ್ರೀರಾಮುಲು ಅವರು ಮಸ್ಕಿ ಕ್ಷೇತ್ರದಲ್ಲಿ ಖಾಸಗಿ ಕೆಲಸಗಳಿಗಾಗಿ ಆಗಮಿಸಿರುವುದನ್ನೇ ತಪ್ಪಾಗಿ ಭಾವಿಸಿ ಮಸ್ಕಿ ಕ್ಷೇತ್ರಕ್ಕೆ ಬಿ.ಶ್ರೀರಾಮುಲು ಬರುತ್ತಾರೆಂಬ ಸುಳ್ಳು ಸುದ್ದಿಯನ್ನು ಕೆಲವರು ಹರಡುತ್ತಿದ್ದಾರೆ ಎಂದರು. ಈ ಕುರಿತು ಸ್ಪಷ್ಟನೆಗಾಗಿ ಪಕ್ಷದ ಕೋರ್ ಕಮಿಟಿ ಪದಾಧಿಕಾರಿಗಳನ್ನು ಭೇಟಿ ಮಾಡಿರುವೆ. ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿಯಿಂದ ನನಗೆ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಶ್ರೀರಾಮುಲು ಅವರು ನಮ್ಮ ಪಕ್ಷದ ನಾಯಕರಾಗಿದ್ದು, ಕಲ್ಯಾಣ ಕರ್ನಾಟಕದಲ್ಲಿ ಪಕ್ಷ ಸಂಘಟನೆಗಾಗಿ ಶ್ರಮಿಸುತ್ತಿರುವುದಾಗಿ ನನಗೆ ದೂರವಾಣಿ ಮುಖಾಂತರ ತಿಳಿಸಿದ್ದಾರೆ. ಪಕ್ಷದಲ್ಲಿ ಕೆಲವರು ಅತೃಪ್ತರಿದ್ದು, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈ ಮೊದಲು ನನ್ನ ಜತೆಗಿದ್ದ ಕೆಲವರು ಈಗ ಕಾಂಗ್ರೆಸ್‌ಗೆ ಹೋಗಿ ಅಲ್ಲಿಯೂ ಅತೃಪ್ತರಾಗಿದ್ದು, ಅಂತಹವರು ಕೂಡ ಶಾಮೀಲಾಗಿದ್ದಾರೆ. ಈ ಕುರಿತು ಈಗಾಗಲೇ ಜಿಲ್ಲಾ ಅಧ್ಯಕ್ಷರ ಗಮನಕ್ಕೆ ತರಲಾಗಿದೆ  ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ ಮಾತನಾಡಿ, ಕಾರ್ಯಕರ್ತರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುವೆ ಎಂದರು. ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ, ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ಪ್ರಮುಖರಾದ ಬಸವಂತರಾಯ ಕುರಿ, ಬಸವರಾಜ ಡೋಣಮರಡಿ, ಮಲ್ಲಪ್ಪ ಅಂಕುಶದೊಡ್ಡಿ ಇದ್ದರು.