ಗೌಡೂರು ಗ್ರಾಮದಲ್ಲಿ ಶನಿವಾರ ಸಂಜೆ ಅದ್ದೂರಿಯಾಗಿ ವೀರಭದ್ರೇಶ್ವರ ದೇವರ ರಥೋತ್ಸವ ಜರುಗಿತು.
ಗುರುಗುಂಟಾ: ಸಮೀಪದ ಗೌಡೂರಿನಲ್ಲಿ ಶ್ರೀ ವೀರಭದ್ರೇಶ್ವರ ರಥೋತ್ಸವ ಶನಿವಾರ ಸಂಪನ್ನಗೊಂಡಿತು.
ಬೆಳಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ಮಹಾ ರುದ್ರಾಭಿಷೇಕ, ರುದ್ರಪಠಣ, ಮಹಾ ಮೃತ್ಯುಂಜಯ ಮಂತ್ರ ಪಠಣದೊಂದಿಗೆ ಪೂಜಾ ವಿಧಿವಿಧಾನಗಳು ಜರುಗಿದವು.
ಸಂಜೆ ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು ರಥಾರೂಢರಾದರು. ಸಂಸ್ಥಾನಿಕ ರಾಜಾ ಜಡಿಸೋಮಲಿಂಗ ನಾಯಕ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ರಥೋತ್ಸವ ಆರಂಭವಾಗುತ್ತಿದ್ದಂತೆ ಭಕ್ತರು ಜಯಘೋಷಗಳೊಂದಿಗೆ ಉತ್ತತ್ತಿ, ಕಲ್ಲುಸಕ್ಕರೆ, ಬಾಳೆಹಣ್ಣು ಸಮರ್ಪಿಸಿದರು.
ನಂತರ ‘ತುತ್ತು ಕೊಟ್ಟ ರೈತನಿಗೆ ಕುತ್ತು ತಂದ ಸರ್ಕಾರ’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
ತಾಪಂ ಮಾಜಿ ಸದಸ್ಯ ರಾಜಾ ಸೇತುರಾಮ ನಾಯಕ, ರಾಜಾ ಲಕ್ಷ್ಮಣ ನಾಯಕ, ರಾಜಾ ಶೇಷಶಯನ ನಾಯಕ, ರಾಜಾ ಗುರುರಾಜ ನಾಯಕ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವೆಂಕಟೇಶ ಗುತ್ತೇದಾರ್, ಎಪಿಎಂಸಿ ಸದಸ್ಯ ಮಹಾದೇವಯ್ಯ ಸ್ವಾಮಿ, ವೀರನಗೌಡ ಪೊಪಾ, ಪ್ರಧಾನ ಅರ್ಚಕ ತೀರ್ಥಯ್ಯ ಸ್ವಾಮಿ, ಗ್ರಾಪಂ ಅಧ್ಯಕ್ಷ ಕೃಷ್ಣನಾಯ್ಕ, ರಾಚಯ್ಯಸ್ವಾಮಿ ಗಣಾಚಾರಿ ಇತರರಿದ್ದರು.