ಸಿಂಧನೂರು ತಾಲೂಕಿನ ಅಂಬಾಮಠದ ಶ್ರೀ ಅಂಬಾದೇವಿ ಮಹಾರಥೋತ್ಸವ ಲಕ್ಷಾಂತರ ಭಕ್ತ ಸಮೂಹದಲ್ಲಿ ಅದ್ದೂರಿಯಾಗಿ ಜರುಗಿತು.
- ಮೊದಲ ಬಾರಿಗೆ ವಿಶಾಲವಾದ ರಥಬೀದಿಯಲ್ಲಿ ಸಾಗಿದ ತೇರು
- ಲಕ್ಷಾಂತರ ಭಕ್ತರು ಭಾಗಿ
- ಅಂಬಾರಿ ಮೆರವಣಿಗೆ ಮೆರುಗು
ಸಿಂಧನೂರು: ತಾಲೂಕಿನ ಸೋಮಲಾಪುರದಲ್ಲಿ ಶನಿವಾರ ಅಂಬಾಮಠದ ಸಿದ್ಧಪರ್ವತವಾಸಿ ಶ್ರೀ ಅಂಬಾದೇವಿ ಮಹಾರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಇದೇ ಮೊದಲ ಬಾರಿಗೆ ವಿಶಾಲವಾದ ರಥಬೀದಿಯಲ್ಲಿ ರಥ ಸಾಗಿ ಕಣ್ಮನ ಸೆಳೆಯಿತು.
ಬೆಳಗ್ಗೆ ಶ್ರೀ ಅಂಬಾದೇವಿಗೆ ವಿಶೇಷ ಪೂಜೆ, ಸಹಸ್ರ ಬಿಲ್ವಾರ್ಚನೆ, ಕುಂಕುಮಾರ್ಚನೆ, ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ-ತೆಲಂಗಾಣ ರಾಜ್ಯಗಳ ಭಕ್ತರ ದಂಡು ಜಾತ್ರೆಯಲ್ಲಿ ಸೇರಿತ್ತು. ಸಂಜೆ ನಾಡಿನ ದೊರೆ ಸಿಎಂ ಸಿದ್ದರಾಮಯ್ಯ, ಪ್ರಪ್ರಥಮ ಬಾರಿಗೆ ಶ್ರೀ ಅಂಬಾದೇವಿ ಸನ್ನಿಧಿಯಲ್ಲಿ ಅಂಬಾರಿ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡುತ್ತಿದ್ದಂತೆ ಲಕ್ಷಾಂತರ ಭಕ್ತರಿಂದ ಉೇ ಉೇ ಅಂಬಾ ಎಂಬ ಉದ್ಘೋಷ ಮೊಳಗಿತು. ತದನಂತರ ಅಂಬಾದೇವಿ ರಥೋತ್ಸವಕ್ಕೂ ಚಾಲನೆ ದೊರೆಯಿತು. ಹೊಸದಾಗಿ ವಿಶಾಲವಾದ ನೂತನ ರಥ ಬೀದಿಯಲ್ಲಿ ರಥ ಸಾಗುತ್ತಿದ್ದಂತೆ ಭಕ್ತರು ರಥೋತ್ಸವಕ್ಕೆ ಬಾಳೆಹಣ್ಣು, ಉತ್ತತ್ತಿ ಅರ್ಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಚಿವರಾದ ಶಿವರಾಜ ತಂಗಡಗಿ, ರಾಮಲಿಂಗರೆಡ್ಡಿ, ಸತೀಶ ಜಾರಕಿಹೊಳಿ, ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರ್ವಿಹಾಳ, ಬಿ.ಎಂ. ನಾಗರಾಜ, ಎಂಎಲ್ಸಿಗಳಾದ ಎ.ವಸಂತಕುಮಾರ, ಬಸನಗೌಡ ಬಾದರ್ಲಿ, ಈಶನ್ಯಾ ಸಾರಿಗೆ ನಿಗಮ ಅಧ್ಯಕ್ಷ ಅರುಣಕುಮಾರ ಪಾಟೀಲ್, ಜಿಲ್ಲಾಧಿಕಾರಿ ನಿತೀಶ ಕೆ., ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಪ್ಪ ರಡ್ಡೇರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಪ್ರಾದೇಶಿಕ ಆಯುಕ್ತೆ ಜಹೀರಾ ನೈಸೀಮ್ ಇದ್ದರು.
ವಿದ್ಯಾರ್ಥಿಗಳಿಗಾಗಿ 14 ಬಸ್
ರಾಜ್ಯ ಸರ್ಕಾರದಿಂದ ತಾಲೂಕಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿಶಾಸಕರ ಅನುದಾನದಲ್ಲಿ ಪ್ರತ್ಯೇಕವಾಗಿ ಒದಗಿಸಿದ 14 ಬಸ್‌ಗಳ ಸಂಚಾರಕ್ಕೆ ಸಾರಿಗೆ ಸಚಿವ ರಾಮಲಿಂಗರಡ್ಡಿ ಚಾಲನೆ ನೀಡಿದರು.
ಒಂದು ತಾಸು ಕಾರ್ಯಕ್ರಮ ವಿಳಂಬ
ಸಿಎಂ ಸಿದ್ದರಾಮಯ್ಯ ಸೇರಿದಂತೆ ವಿವಿಧ ಖಾತೆ ಸಚಿವರು 3.30 ಗಂಟೆ ಬದಲು 4.30 ಗಂಟೆಗೆ ಬಂದಿದ್ದರಿಂದ ಭಕ್ತರು ಒಂದು ಗಂಟೆ ಕಾದು ಸುಸ್ತಾದರು. ಇಡೀ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಸಿಎಂ ಸಿದ್ದರಾಮಯ್ಯ ಅವರ ಭಾಷಣ ಖಡಕ್ ಇರಲಿಲ್ಲ. ಹೇಳಿದ ವಿಷಯವನ್ನೇ ಮತ್ತೆ ಮತ್ತೆ ರಿಪೀಟ್ ಮಾಡುವ ಮೂಲಕ ಮುಜುಗರಕ್ಕೀಡಾಗುವಂತಾಯಿತು. ಅವರ ಭಾಷಣ ಮಧ್ಯೆ ಶಾಸಕ ಹಂಪನಗೌಡ ಬಾದರ್ಲಿ ಅವರು, ತಾಲೂಕಿಗೆ ಮಂಜೂರಾದ ಯೋಜನೆ ವಿವರ, ತುಂಗಭದ್ರಾ ಕ್ರಸ್ಟ್‌ಗೇಟ್ ನಿರ್ಮಾಣ ಕುರಿತು ನೆನಪಿಸುತ್ತಿರುವುದು ಕಂಡುಬಂತು.