ಗಬ್ಬೂರು ಸಮೀಪದ ಸುಲ್ತಾನಪುರದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಚಿಟಗುಪ್ಪದ ಶ್ರೀ ಗುರುಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಬೂದಿಬಸವ ಸ್ವಾಮೀಜಿ, ಶ್ರೀಶಾಂತಮಲ್ಲ ಸ್ವಾಮೀಜಿ, ಶ್ರೀಕಪಿಲ ಸಿದ್ಧರಾಮೇಶ್ವರ ಸ್ವಾಮೀಜಿ, ಮಟಮಾರಿ ಶ್ರೀವೀರಭದ್ರ ಸ್ವಾಮೀಜಿ ಇತರರಿದ್ದರು.  
ರಾಯಚೂರು

ಮನಸ್ಸಿನ ಕೊಳೆ ತೊಳೆಯುತ್ತೆ ಅಧ್ಯಾತ್ಮ

ಪ್ರಮುಖ ಮುಖ್ಯಾಂಶಗಳು

  • ಅಭಿಮತ
  • ಸಾಮೂಹಿಕ
  • ವಿವಾಹ ಕಾರ್ಯಕ್ರಮ
ದೇವದುರ್ಗ: ಮಕ್ಕಳಿಗೆ ಶಿಕ್ಷಣ ಅಕ್ಷರಜ್ಞಾನ ಕೊಡುತ್ತೆ ಹೊರತು ಸಂಸ್ಕಾರ ನೀಡಲ್ಲ. ಮಠ-ಮಾನ್ಯಗಳು, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಿತ್ತುತ್ತವೆ ಎಂದು ರಾಜ್ಯಸಭೆ ಮಾಜಿ ಸದಸ್ಯ ಬಸವರಾಜ ಪಾಟೀಲ್ ಸೇಡಂ ಹೇಳಿದರು.
ತಾಲೂಕಿನ ಗಬ್ಬೂರು ಸಮೀಪದ ಸುಲ್ತಾನಪುರ ಶ್ರೀಪಂಚಾಕ್ಷರಿ ಬೃಹನ್ಮಠದಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಸಾಮೂಹಿಕ ವಿವಾಹ, ಅಯ್ಯಚಾರ ದೀಕ್ಷೆ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ದೇಹ ಮತ್ತು ಬಟ್ಟೆಯ ಕೊಳೆಯನ್ನು ನೀರು ತೊಳೆದರೆ, ಮಠಮಾನ್ಯಗಳು ಆಧ್ಯಾತ್ಮದ ಮೂಲಕ ಮನಸ್ಸಿನ ಕಲ್ಮಶ ತೊಳೆದು ಸಂಸ್ಕಾರ ಬಿತ್ತುತ್ತವೆ. ಮಠಗಳು ಅಧ್ಯಾತ್ಮದ ಜತೆಗೆ ಸಾಮಾಜಸೇವೆಗೆ ಮುನ್ನುಡಿ ಬರೆದು ಸರ್ಕಾರ ಮಾಡದಂಥ ಕೆಲಸವನ್ನು ಮಾಡಿ ಬಡತನ ನಿವಾರಿಸುವ ಕೆಲಸ ಮಾಡುತ್ತಿವೆ.
ವಿಶ್ವವೇ ಒಂದು ಕುಟುಂಬ ಎನ್ನುವ ಕಲ್ಪನೆ ಭಾರತದ್ದು. ಸಂಸ್ಕಾರದ ಕೊರತೆಯಿಂದ ಮನಸ್ಸು ,ಮನೆಗಳು ಒಡೆದು ಮದುವೆಯಾದ ತಕ್ಷಣವೇ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ. ನವ ವಧುವರರು ಆಡಂಬರದ ಬದುಕಿನ ಹಿಂದೆ ಓಡದೆ ನಮ್ಮ ಸಂಸ್ಕೃತಿ ಉಳಿಸಿಬೆಳೆಸಲು ಮುಂದಾಗಬೇಕು. ಕಾಯಕದ ಜತೆ ಜಾನುವಾರು ಸಾಕಣೆ, ಕೃಷಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ಆಹಾರ ಜತೆ ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ನೀರು, ಅನ್ನ, ನಾಲಿಗೆ ಅಮೂಲ್ಯ ವಸ್ತುಗಳಾಗಿವೆ. ನೀರು, ಆಹಾರ ನಮ್ಮ ಆರೋಗ್ಯ ಕಾಪಾಡಿದರೆ ನಾಲಿಗೆ ನಮ್ಮ ಬದುಕು ರೂಪಿಸುತ್ತದೆ. ಹೀಗಾಗಿ ಮಕ್ಕಳಿಗೆ ಸಂಸ್ಕಾರ ಬಿತ್ತಬೇಕು ಎಂದರು.
ಯುವಸಾಹಿತಿ ಪ್ರಶಾಂತ ರಿಪ್ಪನ್‌ಪೇಟೆ ಮಾತನಾಡಿ, ಸನಾತನ ಪಂಚಪೀಠಗಳು ಮನುಕುಲದ ಉದ್ಧಾರಕ್ಕೆ ಶ್ರಮಿಸುತ್ತಿದ್ದು ಜಗತ್ತಿಗೆ ಸಂಸ್ಕಾರವನ್ನು ಬಿತ್ತುತ್ತಿವೆ. ಸುಲ್ತಾನಪುರ ಶ್ರೀಗಳು ಭಕ್ತಿ, ಇಷ್ಟಲಿಂಗ ಪೂಜೆ, ಕಾಯಕದಿಂದ ಈ ಪ್ರದೇಶವನ್ನು ಭೂಕೈಲಾಸ ಮಾಡಿದ್ದಾರೆ. ಅನ್ನ, ಸಂಸ್ಕಾರ ಜತೆಗೆ ಸಾಮೂಹಿಕ ವಿವಾಹ ಮಾಡಿ ಬಡವರ ಮನೆ ಬೆಳಗುತ್ತಿವೆ. ಮಠಗಳ ಸಂಸ್ಕಾರದಿಂದ ಕಲ್ಯಾಣ ಕರ್ನಾಟಕ ಭಾಗ ಆಧ್ಯಾತ್ಮಕವಾಗಿ ಕಲ್ಯಾಣವಾಗಿದೆ. ಪಾಲಕರು ಮಕ್ಕಳಿಗೆ ಶಿಕ್ಷಣ ಜತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು ಎಂದರು.
17ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಪೀಠಾಧಿಪತಿ ಶ್ರೀಶಂಭುಸೋಮನಾಥ ಸ್ವಾಮೀಜಿ ತುಲಾಭಾರ ಜರುಗಿತು. ಶ್ರೀ ಗುರುಮೂರ್ತಿ ಸ್ವಾಮೀಜಿ, ಶ್ರೀ ವೀರಸಂಗಮೇಶ್ವರ ಸ್ವಾಮೀಜಿ, ಜಾಗಟಗಲ್‌ನ ಶ್ರೀರಾಚಯ್ಯಪ್ಪ ಶರಣರು, ಶ್ರೀವಿರೂಪಾಕ್ಷಪ್ಪ ಶರಣರು, ಬೆಟ್ಟದಯ್ಯಪ್ಪ ಶರಣರು, ಶಿವಶಂಕರಪ್ಪ ಸಾಹುಕಾರ, ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಇತರರಿದ್ದರು.