ದೇವದುರ್ಗದಲ್ಲಿ ನ್ಯಾಯಾಲಯ ಕಟ್ಟಡವನ್ನು ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ವಿಭು ಬಖ್ರು ಉದ್ಘಾಟಿಸಿದರು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್, ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ. ಶುಕುರೆ ಕಮಲ್, ಪ್ರಧಾನ ಜಿಲ್ಲಾ ನ್ಯಾಯಾಧೀಶ ಮಾರುತಿ ಬಾಗಡೆ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ್, ಎಚ್.ಶಶಿಧರ ಶೆಟ್ಟಿ ಇದ್ದರು.
- ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ವಿಭು ಬಖ್ರು ಅಭಿಮತ
- ದೇವದುರ್ಗದಲ್ಲಿ ಕೋರ್ಟ್ ಉದ್ಘಾಟನೆ
ದೇವದುರ್ಗ: ದೇಶದ ಸಂವಿಧಾನ, ಕಾನೂನು ಸುವ್ಯವಸ್ಥೆ ಎತ್ತಿಹಿಡಿಯುವುದರ ಜತೆ ಅನ್ಯಾಯಕ್ಕೆ ಒಳಗಾದವರಿಗೆ ತ್ವರಿತ ನ್ಯಾಯದಾನ ಮಾಡುವುದು ನಮ್ಮ ಪ್ರಥಮ ಪ್ರಾಶಸ್ತ್ಯವಾಗಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹೇಳಿದರು.
ಪಟ್ಟಣದ ಶಂಕರಬಂಡಿ ರಸ್ತೆಯಲ್ಲಿ ನಿರ್ಮಿಸಿರುವ ತಾಲೂಕು ನ್ಯಾಯಾಲಯ ಕಟ್ಟಡ ಹಾಗೂ ವಕೀಲರ ಭವನ ಉದ್ಘಾಟಿಸಿ ಶನಿವಾರ ಮಾತನಾಡಿದರು.
ದೇಶದ ಸಂವಿಧಾನ ಪ್ರತಿ ಪ್ರಜೆಗೂ ಸಮಾನ ಅವಕಾಶ, ಬದುಕು ನೀಡಿದೆ. ಇಲ್ಲಿನ ನ್ಯಾಯಾಲಯ ಕಟ್ಟಡ ಅತ್ಯಂತ ಎತ್ತರದ ಪ್ರದೇಶ, ಉತ್ತಮ ವಾತಾವರಣದಲ್ಲಿದೆ. ಅದೇರೀತಿ ಇಲ್ಲಿನ ನ್ಯಾಯಾಂಗ ವ್ಯವಸ್ಥೆಯನ್ನು ಪಾರದರ್ಶಕವಾಗಿ ನೀಡಿ ರಾಜ್ಯಕ್ಕೆ ಮೇಲ್ಪಂಕ್ತಿ ಹಾಕಿಕೊಡಬೇಕು.
ಯುವ ವಕೀಲರು, ಅಧಿಕಾರಿಗಳು ದೇಶದಲ್ಲಿ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪುಗಳನ್ನು ಅಧ್ಯಯನ ಮಾಡಬೇಕು. ವೃತ್ತಿಗೌರವಕ್ಕೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಬೇಕು. ನ್ಯಾಯಾಂಗ ವ್ಯವಸ್ಥೆಗೆ ಹೊಸ ಕಟ್ಟಡ, ಮೂಲಸೌಲಭ್ಯ, ತಂತ್ರಜ್ಞಾನ ವ್ಯವಸ್ಥೆ ಕಲ್ಪಿಸುತ್ತಿರುವುದು ನ್ಯಾಯಾಂಗ ಇಲಾಖೆ ಬಲಗೊಳ್ಳುತ್ತಿರುವ ಲಕ್ಷಣಗಳಾಗಿವೆ ಎಂದರು.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ್ ಮಾತನಾಡಿ, ನ್ಯಾಯಾಲಯ ಕೇವಲ ನ್ಯಾಯಕೊಡುವ ಸ್ಥಳವಲ್ಲ. ತುಳಿತಕ್ಕೆ ಒಳಗಾದವರಿಗೆ ದೇವಾಲಯವಿದ್ದಂತೆ. ಸೋತವನಿಗೂ ಸಮಾಧಾನ ಆಗುವ ರೀತಿಯಲ್ಲಿ ನ್ಯಾಯದಾನ ಸಿಗಬೇಕು. ಜನರಿಗೆ ನ್ಯಾಯಕೊಡಿಸುವ ಕಾರ್ಯ ವಕೀಲರು ಹಾಗೂ ನ್ಯಾಯಾಧೀಶರಿಂದ ಆಗಬೇಕು. ತೀರ್ಪು ನೀಡುವ ನ್ಯಾಯಾಧೀಶರಿಗೆ ಆತ್ಮಸಾಕ್ಷಿಯೇ ಕಾವಲುಗಾರ ಆಗಬೇಕು. ತ್ವರಿತ ನ್ಯಾಯದಾನ ಮತ್ತು ಗುಣಮಟ್ಟದ ತೀರ್ಪಿಗೆ ಇಲ್ಲಿನ ನ್ಯಾಯಾಲಯ ರಾಜ್ಯದಲ್ಲಿ ಹೆಸರು ಮಾಡಬೇಕು ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ. ಶುಕುರೆ ಕಮಲ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾರುತಿ ಬಾಗಡೆ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ್, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ, ನ್ಯಾಯಾಧೀಶರಾದ ಸುರೇಶ ಅಪ್ಪಣ್ಣ ಸೌದಿ, ರಫಿಕ್ ಅಹ್ಮದ್, ವಕೀಲರ ಸಂಘದ ರಾಜ್ಯಾಧ್ಯಕ್ಷ ಮಿಟ್ಟಲ್‌ಕೋಡ್, ಜಿಲ್ಲಾಧಿಕಾರಿ ನಿತೀಶ್ ಕೆ., ಎಸ್ಪಿ ಎಂ.ಪುಟ್ಟಮಾದಯ್ಯ, ಹಿರಿಯ ಶ್ರೇಣಿ ನ್ಯಾಯಾಧೀಶ ಎಚ್.ಎ.ಸಾತ್ವಿಕ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಇತರರಿದ್ದರು.