ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರುಪೀಠದಲ್ಲಿ ಆಯೋಜಿಸಿದ್ದ ಹಾಲುಮತ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ರಾಜ್ಯ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರನ್ನು ಸನ್ಮಾನಿಸಲಾಯಿತು. ಹೊಸದುರ್ಗದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ಸಿದ್ಧರಾಮಾಂದ ಸ್ವಾಮೀಜಿ, ಗೋಳಸಾರದ ಶ್ರೀ ಅಭಿನವ ಪುಂಡಲಿಂಗ ಮಹಾರಾಜರು, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ನಾಗೇಂದ್ರ, ಡಾ.ಲಿಂಗದಹಳ್ಳಿ ಹಾಲಪ್ಪ, ಡಾ.ವಡ್ಡಗೇರಿ ನಾಗರಾಜಯ್ಯ, ಡಾ.ಚಂದ್ರಪ್ಪ ಸೊಬಟಿ, ಡಾ.ಎನ್.ಬಿ. ವಿರೂಪಾಕ್ಷಿ ಇತರರಿದ್ದರು. 
ರಾಯಚೂರು

ಊಹಾತ್ಮಕ ಪತ್ರಿಕೋದ್ಯಮ ವಿಜೃಂಭಣೆ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಕಳವಳ
  • ಹಾಲುಮತ
  • ಸಿದ್ಧ ಪರಂಪರೆ
ದೇವದುರ್ಗ: ತಂತ್ರಜ್ಞಾನದ ಪ್ರಭಾವ ಹಾಗೂ ಸಾಮಾಜಿಕ ಜಾಲತಾಣದ ಹಾವಳಿಯಿಂದ ಊಹಾತ್ಮಕ ಪತ್ರಿಕೋದ್ಯಮ ವಿಜೃಂಭಿಸುತ್ತಿದೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರುಪೀಠದಲ್ಲಿ ಆಯೋಜಿಸಿದ್ದ ಹಾಲುಮತ ಸಾಹಿತ್ಯ ಸಮ್ಮೇಳನ ಹಾಗೂ ಹಾಲುಮತ ಸಿದ್ಧ ಪರಂಪರೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಂಗಳವಾರ ಮಾತನಾಡಿದರು.
ಪತ್ರಿಕೋದ್ಯಮದಲ್ಲಿ ಸಮಾಜದ ಅಭಿವೃದ್ಧಿ ಹಾಗೂ ತನಿಖಾ ವರದಿಗಳು ಕುಸಿಯುತ್ತಿವೆ. ಕಲ್ಪನೆ, ಊಹಾತ್ಮಕತೆ, ವೈಭವೀಕರಣ ಹೆಚ್ಚಾಗಿ ಮಾಧ್ಯಮದ ಮೇಲೆ ವಿಶ್ವಾಸಾರ್ಹತೆ ಕುಸಿಯುತ್ತಿದೆ. ಈ ಬಗ್ಗೆ ಚಿಂತನೆಗಳು ನಡೆಯಬೇಕಿದ್ದು ಉದ್ಯಮದಿಂದ ಮಾಧ್ಯಮ ದೂರವಾಗಿ ತನ್ನ ವಿಶ್ವಾಸಾರ್ಹತೆ ಹಾಗೂ ನೈಜತೆ ಉಳಿಸಿಕೊಳ್ಳಬೇಕು ಎಂದರು.
ಮಾಹಿತಿ ಹಕ್ಕು ಕಾಯ್ದೆ ದೇಶದ ಪ್ರಜೆಗಳಿಗೆ ದೊರೆತ ಪ್ರಬಲ ಅಸ್ತ್ರ. ಅದನ್ನು ಸರಿಯಾಗಿ ಉಪಯೋಗಿಸುವ ಕಲೆಯನ್ನು ಜನರು ಕಲಿಯಬೇಕಿದೆ. 1962ರಲ್ಲಿ ಆರ್‌ಟಿಐ ಸ್ವಿಡಾನ್ ದೇಶದಲ್ಲಿ ಜಾರಿಯಲ್ಲಿತ್ತು. ಹಲವು ಸಾಹಿತಿಗಳು, ಸಂಘಟನೆಗಳ ಹೋರಾಟದ ಫಲವಾಗಿ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ವಿಶೇಷ ಕಾಳಜಿವಹಿಸಿ ಜಾರಿಗೊಳಿಸಿದ್ದರು. ಅದನ್ನು ನಾವು ಸದ್ಬಳಕೆ ಮಾಡಿಕೊಂಡು ಉಳಿಸಿಕೊಂಡು ಹೋಗಬೇಕಿದೆ ಎಂದರು.
ಹಾಲುಮತ ಸಂಸ್ಕೃತಿಗೆ ಐದು ಸಾವಿರ ವರ್ಷಗಳ ಇತಿಹಾಸವಿದ್ದು, ಡಚ್ಚರು ಅಥವಾ ಡೆಕ್ಕನ್ ಸಾಮ್ರಾಜ್ಯ ಕಟ್ಟುವಲ್ಲಿ ಹಾಲುಮತ ಸಮಾಜ ಬಹುಮುಖ್ಯ ಪಾತ್ರವಹಿಸಿತ್ತು. ಅಲ್ಲದೆ ಕ್ರಿಸ್ತ ಪೂರ್ವ 2000 ವರ್ಷಗಳ ಹಿಂದೆ ಮಧ್ಯ ಏಷ್ಯಾದಲ್ಲಿ ಹಾಲುಮತ ಸಂಸ್ಕೃತಿ ಸಾಮ್ರಾಜ್ಯವಿತ್ತು ಎನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ. ಪಲ್ಲವರು ಹಾಗೂ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಹಾಲುಮತ ಸಮಾಜದವರು ಎನ್ನುವುದು ಇತಿಹಾಸ. ಅಲ್ಲದೆ ಕೇರಳದಲ್ಲಿ ಕುಲಾಲ್ ಎನ್ನುವ ಗ್ರಾಮ ಸ್ಥಾಪನೆ ಮಾಡಿದ್ದಾರೆ. ಹಾಲುಮತ ಸಮಾಜ ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡಿದೆ. ವಾಟ್ಸ್‌ಆ್ಯಪ್ ಯುನಿವರ್ಸಿಟಿ ಹಾಗೂ ಸುಳ್ಳು ವಿಜೃಂಭಿಸುವ ಸಂಸ್ಕೃತಿ ತಡೆಯಬೇಕಿದೆ. ಜಾನಪದ ಹಾಲುಮತ ಮಹಾಕಾವ್ಯ, ಗೊಲ್ಲಾಳಪ್ಪ ಪುರಾಣ, ಮಾಳಿಂಗರಾಯ ಪುರಾಣ ಸೇರಿ ಹಾಲುಮತ ಸಾಹಿತ್ಯ ಅಧ್ಯಯನಕ್ಕೆ ಆದ್ಯತೆ ನೀಡಬೇಕಿದೆ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಹಾಲುಮತ ಸಾಹಿತ್ಯ ಹಾಗೂ ಸಂಸ್ಕೃತಿ ಪರಂಪರೆಗೆ ಪ್ರಚಾರ ಕೊಡಬೇಕು ಎಂದರು.
ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ಮಾತನಾಡಿ, ಚುನಾವಣೆ ಆಯೋಗ ದೇಶದ ಪ್ರತಿಯೊಬ್ಬ ಭಾರತೀಯರಿಗೆ ಮತದಾನ ಎನ್ನುವ ಶಕ್ತಿಯುತವಾದ ಅಸ್ತ್ರ ನೀಡಿದೆ. ಅದನ್ನು ಪ್ರತಿಯೊಬ್ಬರೂ ಚಲಾಯಿಸಿದರೆ ಮಾತ್ರ ಮತದಾನಕ್ಕೆ ಶಕ್ತಿ ಬರಲಿದೆ ಎಂದರು.
ರಾಜ್ಯ ಮಾಹಿತಿ ಆಯೋಗದ ಆಯುಕ್ತ ವೆಂಕಟಸಿಂಗ್, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ನಿಂಗಜ್ಜ ಗಂಗಾವತಿ, ಸೋಮಲಿಂಗ ಧನಗೊಂಡ, ಮಹಾಂತೇಶ ಕೌಲಗಿ, ಶಿವಣ್ಣ ವಕೀಲ ಅವರನ್ನು ಸನ್ಮಾನಿಸಲಾಯಿತು. ಹೊಸದುರ್ಗದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.
ಪೀಠಾಧಿಪತಿ ಶ್ರೀ ಸಿದ್ಧರಾಮಾನಂದ ಸ್ವಾಮೀಜಿ, ಗೋಳಸಾರದ ಶ್ರೀ ಅಭಿನವ ಪುಂಡಲಿಂಗ ಮಹಾರಾಜರು ಸಾನ್ನಿಧ್ಯವಹಿಸಿದ್ದರು. ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ನಾಗೇಂದ್ರ, ಪ್ರಮುಖರಾದ ಡಾ.ಲಿಂಗದಹಳ್ಳಿ ಹಾಲಪ್ಪ, ಡಾ.ವಡ್ಡಗೇರಿ ನಾಗರಾಜಯ್ಯ, ಡಾ.ಚಂದ್ರಪ್ಪ ಸೊಬಟಿ, ಡಾ.ಎನ್.ಬಿ. ವಿರೂಪಾಕ್ಷಿ, ಡಾ.ಗಂಗಾಧರ್ ಕೊಡ್ಲಿಯವರ್, ಪಿ.ಗೋಣಿಬಸಪ್ಪ, ಶರಣಪ್ಪ ಇತರರಿದ್ದರು.