ಸಿಂಧನೂರಿನಲ್ಲಿ ‘ವಿದ್ಯಾರ್ಥಿ ರಥ’ ಸಾರಿಗೆಗೆ ಶಾಸಕ ಹಂಪನಗೌಡ ಬಾದರ್ಲಿ ಸೋಮವಾರ ಚಾಲನೆ ನೀಡಿದರು. ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ತಹಸೀಲ್ದಾರ್ ಅರುಣ್ ಹೆಚ್.ದೇಸಾಯಿ, ತಾಪಂ ಇಒ ಚಂದ್ರಶೇಖರ ಇದ್ದರು.
- ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ
- ಸಿಂಧನೂರಿನಲ್ಲಿ 14 ಬಸ್‌ಗಳಿಗೆ ಚಾಲನೆ
ಸಿಂಧನೂರು: ಗ್ರಾಮೀಣ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬರಲು ಬಸ್ ತೊಂದರೆ ಎದುರಿಸುತ್ತಿರುವುದನ್ನು ಮನಗಂಡು 5 ಕೋಟಿ ರೂ. ವೆಚ್ಚದಲ್ಲಿ 14 ಬಸ್ ಸೌಕರ್ಯ ಒದಗಿಸಿ ಅನುಕೂಲ ಮಾಡಿಕೊಡಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಬಸ್ ನಿಲ್ದಾಣದಲ್ಲಿ ಕೆಕೆಆರ್‌ಡಿಬಿಯ ಶಾಸಕರ ಅನುದಾನದ ಅಡಿಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೆಕೆಆರ್‌ಟಿಸಿಯ ‘ವಿದ್ಯಾರ್ಥಿ ರಥ’ 14 ವಿಶೇಷ ಬಸ್‌ಗಳಿಗೆ ಚಾಲನೆ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಸರ್ಕಾರ ಮಹತ್ವ ಉದ್ದೇಶದಿಂದ ನಮ್ಮ ಆಶಯದಂತೆ ಹೊಸ ಬಸ್‌ಗಳಲ್ಲಿ ಶೇ.90ಕ್ಕೂ ಅಧಿಕ ವಿದ್ಯಾರ್ಥಿಗಳೇ ಇರಬೇಕು. ಕಾಲೇಜುಗಳಲ್ಲಿ ಶೇ.50 ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದ್ದು, ಇನ್ನು ಮುಂದೆ ಶೇ.70 ರಷ್ಟು ವಿದ್ಯಾರ್ಥಿಗಳು ಹಾಜರಿರಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿ ತಾಲೂಕು ಅಭಿವೃದ್ಧಿ ಹೊಂದುತ್ತಿದೆ. ಐಎಎಸ್, ಐಎಪಿಎಸ್, ಕೆಎಎಸ್ ತರಬೇತಿಗಾಗಿ 2 ಕೋಟಿ ರೂ.ಯಲ್ಲಿ ತರಬೇತಿ ಕೇಂದ್ರ ಆರಂಭಿಸಲಾಗುವುದು ಎಂದರು.
ಎಂಎಲ್ಸಿ ಬಸನಗೌಡ ಬಾದರ್ಲಿ, ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಅನಿಲ್‌ಕುಮಾರ, ತಹಸೀಲ್ದಾರ್ ಅರುಣ್ ಎಚ್.ದೇಸಾಯಿ, ತಾಪಂ ಇಒ ಚಂದ್ರಶೇಖರ, ಸುಡಾ ನಿರ್ದೇಶಕರಾದ ವೈ.ನರೇಂದ್ರನಾದ್, ಚಂದ್ರಶೇಖರ, ಖಾಜಿ ಮಲಿಕ್, ಸಾರಿಗೆ ಘಟಕ ವ್ಯವಸ್ಥಾಪಕ ಹೊನ್ನಪ್ಪ ಇದ್ದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ
ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅಲ್ಫಿಯಾ, ಕೀರ್ತನಾ, ಮೌನಿಕಾ, ಪ್ರಕಾಶ್ ಮಾತನಾಡಿ, ಗ್ರಾಮೀಣ ಭಾಗಕ್ಕೆ ಸರಿಯಾದ ಬಸ್ ಸೌಲಭ್ಯವಿಲ್ಲದೆ ತರಗತಿಗೆ ಹಾಜರಾಗಲು ಸಮಸ್ಯೆಯಾಗುತ್ತಿದ್ದು, ಹೊಸ ಬಸ್‌ಗಳಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು. ವಿದ್ಯಾರ್ಥಿ ಬಸವರಾಜ ಮಾಡಸಿರವಾರ ಮಾತನಾಡಿ, ನಾನು ಎಸ್ಸೆಸ್ಸೆಲ್ಸಿಯಲ್ಲಿ ಶೇ.88 ಅಂಕ ಪಡೆದಿದ್ದೇನೆ. ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕೂ ಅಧಿಕ ಅಂಕಪಡೆಯುವೆ. ಆದರೆ, ನಾನು ಪೊಲಿಟಿಷಿಯನ್ ಆಗಬೇಕೆಂಬ ಗುರಿ ಹೊಂದಿದ್ದೇನೆ ಎನ್ನುತ್ತಿದ್ದಂತೆ ಶಾಸಕ ಹಂಪನಗೌಡ ಮಧ್ಯಪ್ರವೇಶಿಸಿ, ರಾಜಕಾರಣ ಎಂಬುದು ಮುಳ್ಳಿನ ಮೇಲಿನ ನಡಿಗೆ ಇದ್ದಂತೆ. ಬದ್ಧತೆ ಇರಬೇಕು. ಅನುಭವ ಮತ್ತು ಸಮಯ ಎಲ್ಲವನ್ನೂ ಕಲಿಸುತ್ತದೆ ಎಂದರು. ವಿವಿಧ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಶಾಸಕರು ಉತ್ತರಿಸಿದರು.