ಶಿವಾನಂದ ಗಾಣಿಗ  
ರಾಯಚೂರು

ಚಿನ್ನದ ಹಟ್ಟಿಯಲ್ಲಿ ಗಾಂಜಾ ವಾಸನೆ

ಪ್ರಮುಖ ಮುಖ್ಯಾಂಶಗಳು

  • ಕ್ರಮ ಕೈಗೊಳ್ಳಲು ಜನರ ಒತ್ತಾಯ
  • ಹಟ್ಟಿ ಚಿನ್ನದಗಣಿ ಗಾಂಜಾ ಮಾರಾಟ ಬಹಿರಂಗ
ಹಟ್ಟಿ ಚಿನ್ನದಗಣಿ: ರಾಜ್ಯದ ಖಜಾನೆಗೆ ಕೋಟಿ-ಕೋಟಿ ಆದಾಯ ತರುವ ಚಿನ್ನದ ಪಟ್ಟಣ ಹಟ್ಟಿಯಲ್ಲಿ ಈಗ ಗಾಂಜಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಪಟ್ಟಣ ಸೇರಿದಂತೆ ಸುತ್ತ್ತಲಿನ ಗ್ರಾಮಗಳಲ್ಲಿ ಗಾಂಜಾ ಮಾರಾಟ ಬಹಿರಂಗವಾಗಿ ನಡೆಯುತ್ತಿದ್ದು, ಅದನ್ನು ತಡೆಯಬೇಕಾದ ವ್ಯವಸ್ಥೆಯೇ ಮೌನ ವಹಿಸಿದೆ ಎಂದು ಜನ ಅನುಮಾನ ವ್ಯಕ್ತಪಡಿಸಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕರು ಹಾಗೂ ಅಪ್ರಾಪ್ತರು ಕೂಡ ಗಾಂಜಾ ವ್ಯಸನದ ಬಲೆಗೆ ಬೀಳುತ್ತಿದ್ದಾರೆ. ಕೈಯಲ್ಲಿ ಪುಸ್ತಕ ಇರಬೇಕಾದ ವಯಸ್ಸಿನಲ್ಲಿ ನಶೆಯ ದಾಸರಾಗುತ್ತಿರುವ ಯುವಕರ ಬದುಕು ಹಾಳಾಗುತ್ತಿದೆ. ಗಾಂಜಾ ಮತ್ತಿನಲ್ಲಿ ಜಗಳ, ಗಲಾಟೆ, ಕಳ್ಳತನ, ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು, ಹಟ್ಟಿಯ ಸಾಮಾಜಿಕ ವಾತಾವರಣವೇ ಹದಗೆಡುತ್ತಿದೆ.
ಇಷ್ಟೆಲ್ಲ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕೇವಲ ಒಬ್ಬಿಬ್ಬರು ಪೆಡ್ಲರ್‌ಗಳನ್ನು ಬಂಧಿಸಿ ಕಾರ್ಯಾಚರಣೆ ಮಾಡಿದಂತೆ ತೋರಿಸಿಕೊಳ್ಳುತ್ತಿದೆ. ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಜಾಲದ ಮೂಲಕ್ಕೆ ಹೋಗುವ ಬದಲು ಸಣ್ಣಪುಟ್ಟ ವ್ಯಕ್ತಿಗಳನ್ನು ಬಂಧಿಸುವ ಕೆಲಸ ನಡೆಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಹಟ್ಟಿ ಠಾಣೆಯ ಕೆಲ ಪೊಲೀಸ್ ಸಿಬ್ಬಂದಿ ಕಳೆದ ಆರೇಳು ವರ್ಷಗಳಿಂದ ಇಲ್ಲಿಯೇ ಬೇರೂರಿದ್ದಾರೆ. ಇದರಿಂದ ಸ್ಥಳೀಯ ಅಕ್ರಮ ಜಾಲಗಳೊಂದಿಗೆ ಹೊಂದಾಣಿಕೆ ಬೆಳೆದಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಹಟ್ಟಿ ಪಟ್ಟಣದಲ್ಲಿ ಯುವಕರ ಭವಿಷ್ಯ ನಶಿಸುತ್ತಿದ್ದರೂ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಪೊಲೀಸ್ ಮೇಲಧಿಕಾರಿಗಳಾಗಲಿ ಕ್ರಮ ಕೈಗೊಳ್ಳದಿರುವುದು ದುರಂತ.
ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಚಿನ್ನದ ಹಟ್ಟಿ ಎಂಬ ಹೆಸರಿಗಿಂತ ಗಾಂಜಾದ ಹಟ್ಟಿ ಎಂಬ ಕಳಂಕವೇ ದೊಡ್ಡದಾಗುವ ಅಪಾಯ ಎದುರಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ತಕ್ಷಣ ವಿಶೇಷ ತನಿಖಾ ದಳ ರಚಿಸಿ, ವರ್ಷಗಳಿಂದ ಹಟ್ಟಿಯಲ್ಲೇ ಉಳಿದಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ, ಗಾಂಜಾ ಜಾಲದ ಮೂಲವನ್ನು ಬೇರುಸಹಿತ ಕಿತ್ತು ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
"

ಹಟ್ಟಿ ಸುತ್ತ್ತಲಿನ ಗ್ರಾಮಗಳಿಗೆ ನಿರಂತರ ಭೇಟಿ ನೀಡಿ ಕ್ರಿಕೆಟ್ ಬೆಟ್ಟಿಂಗ್, ಮಟ್ಕಾ, ಇಸ್ಪೀಟ್ ಆಡುವವರು ಮತ್ತು ಗಾಂಜಾ ಮಾರಾಟ ಮಾಡುವವರ ವಿರುದ್ಧ ನಿಗಾವಹಿಸಲಾಗಿದೆ ಮತ್ತು ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಗಾಂಜಾ ಮತ್ತು ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳ ವಿರುದ್ಧ ಕ್ರಮಕ್ಕೆ ತಂಡ ರಚಿಸಿ ಬಂಧಿಸುತ್ತೇವೆ ಹಾಗೂ ಯಾವುದೇ ಅಕ್ರಮ ನಡೆಯದಂತೆ ನೋಡಿಕೊಳ್ಳುತ್ತೇವೆ.

— > ಶಿವಾನಂದ ಗಾಣಿಗ ಪೊಲೀಸ್ ಇನ್ಸ್‌ಪೆಕ್ಟರ್, ಹಟ್ಟಿ ಠಾಣೆ