ಸಿಂಧನೂರಿನ ನಗರಸಭೆ ಸಭಾಂಗಣದಲ್ಲಿ ಜಿಲ್ಲಾ ಹೋರಾಟ ಸಮಿತಿ ರಚನೆ ಕುರಿತು ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಶುಕ್ರವಾರ ಸಂಜೆ ಸಭೆ ನಡೆಯಿತು. ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಇದ್ದರು. 
ರಾಯಚೂರು

ಸಿಂಧನೂರು ಜಿಲ್ಲಾ ಕೇಂದ್ರಕ್ಕೆ ಸಂಘಟನೆಗಳ ಸಹಕಾರ ಅಗತ್ಯ

ನರೇಶ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ
  • ಹೋರಾಟ ಸಮಿತಿ ರಚನೆ ಕುರಿತು ಸಭೆ
ಸಿಂಧನೂರು: ಸಿಂಧನೂರು ಜಿಲ್ಲಾ ಹೋರಾಟ ಸಮಿತಿ ರಚಿಸುವ ಕುರಿತು ನಗರಸಭೆಯಲ್ಲಿ ಶುಕ್ರವಾರ ಸಂಜೆ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಭೆ ನಡೆಯಿತು. 
ಶಾಸಕ ಬಾದರ್ಲಿ ಮಾತನಾಡಿ, ಸಿಂಧನೂರು, ಲಿಂಗಸುಗೂರು, ಮಸ್ಕಿ ಹಾಗೂ ಸಿರವಾರ ಒಳಗೊಂಡು ಜನಸಂಖ್ಯಾಧಾರಿತವಾಗಿ ನೂತನ ಜಿಲ್ಲೆ ರಚನೆಗೆ ಸಂಬಂಧಿಸಿ ಪ್ರಯತ್ನಿಸಬಹುದು. ಈ ನಿಟ್ಟಿನಲ್ಲಿ ಸಂಘಟನೆಗಳು ತೊಡಗಿಸಿಕೊಳ್ಳುವುದು ಮುಖ್ಯ ಎಂದರು. 
ಪ್ರಮುಖರಾದ ದೇವೇಂದ್ರಗೌಡ, ಡಿ.ಎಚ್.ಪೂಜಾರ್, ವೈ.ನರೇಂದ್ರನಾಥ, ಕೆ.ಭೀಮನಗೌಡ ಹಾಗೂ ಡಾ.ಬಿ.ಎನ್.ಪಾಟೀಲ್ ಮಾತನಾಡಿ, ಆಯಾ ಸಂಘಟನೆಗಳ ಪ್ರಮುಖರು ಒಗ್ಗೂಡಿ ಸಿಂಧನೂರು ಜಿಲ್ಲಾ ಕೇಂದ್ರವಾದರೆ ಏನೆಲ್ಲ ಅನುಕೂಲವಾಗಲಿದೆ ಎಂಬುದರ ಕುರಿತು ಉಳಿದ ತಾಲೂಕುಗಳಿಗೆ ಮನವರಿಕೆ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ಸಮಿತಿ ರಚಿಸಿದರೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ತ್ರೀಶಕ್ತಿ ಸಂಘದ ಶ್ರೀದೇವಿ ಶ್ರೀನಿವಾಸ ಮಾತನಾಡಿ, ಪಕ್ಷಾತೀತವಾಗಿ ಸಮಿತಿ ರಚನೆ ಮಾಡುವ ಮೂಲಕ ಜಿಲ್ಲಾ ಹೋರಾಟವನ್ನು ಮುನ್ನೆಲೆಗೆ ತರಬೇಕಿದೆ. ಈ ನಿಟ್ಟಿನಲ್ಲಿ ಸಂಘಟನೆಗಳ ಮುಖಂಡರು ಕಾಳಜಿ ವಹಿಸಿ ಹೋರಾಟದಲ್ಲಿ ತೊಡಗಿಸಿಕೊಂಡಾಗ ಸರ್ಕಾರದ ಮಟ್ಟದಲ್ಲಿ ನಮ್ಮ ಪರವಾದ ತೀರ್ಮಾನಗಳು ಬರಲು ಸಾಧ್ಯ ಎಂದು ತಿಳಿಸಿದರು. 
ಸಿಂಧನೂರು ನಗರದಲ್ಲಿ ಜಿಲ್ಲಾಮಟ್ಟದ ಕಚೇರಿಗಳಿಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ಕೋರ್ಟ್ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಆಸ್ಪತ್ರೆ ಮಂಜೂರಾಗಿದೆ. ಸುಡಾ, ಕೆಇಬಿ ಕಾರ್ಯಾಲಯ, ಆರ್‌ಟಿಒ ಕಚೇರಿ ಇದೆ. ಡಿಡಿಪಿಐ ಕಚೇರಿ, ಹೆಚ್ಚುವರಿ ಎಸ್ಪಿ ಕಚೇರಿ ಆರಂಭವಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ತಿಳಿಸಿದ ಶಾಸಕರು, ಸಿಂಧನೂರು ಜಿಲ್ಲೆ ಆಗಬೇಕೆಂಬುದು ಎಲ್ಲರ ಆಸೆಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಸಂಘಟನೆ ತೊಡಗಿಸಿಕೊಳ್ಳಬೇಕು ಎಂದರು. ಸಂಸದ ರಾಜಶೇಖರ ಹಿಟ್ನಾಳ, ಕೃಷಿ ಬೆಲೆ ಆಯೋಗ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಇದ್ದರು.