ಸಿಂಧನೂರಿನಲ್ಲಿ ಸಿಐಟಿಯುನಿಂದ ಸಹಿ ಸಂಗ್ರಹ ಚಳವಳಿ ಅಭಿಯಾನ ನಡೆಯಿತು. ಪ್ರಮುಖರಾದ ಕರಿಯಪ್ಪ ನಾಯಕ, ಮರಿಸ್ವಾಮಿ, ಯಂಕಪ್ಪ, ಹೊನ್ನೂರಪ್ಪ, ನಾಗನಗೌಡ, ಮಲ್ಲಯ್ಯ ನಾಯಕ, ಇಬ್ರಾಹಿಂಸಾಬ್, ಶಂಕ್ರಪ್ಪ ದಾಸರ ಇತರರಿದ್ದರು. 
ರಾಯಚೂರು

ಕಾರ್ಮಿಕ ಹಕ್ಕುಗಳ ರಕ್ಷಣೆಗೆ ಸಹಿ ಸಂಗ್ರಹ ಚಳವಳಿ

ಪ್ರಮುಖ ಮುಖ್ಯಾಂಶಗಳು

  • ಸಿಂಧನೂರಿನಲ್ಲಿ ಸಿಐಟಿಯು ಮುಖಂಡರಿಂದ ಅಭಿಯಾನ
ಸಿಂಧನೂರು: ವೈಜ್ಞಾನಿಕ ಕನಿಷ್ಠ ವೇತನ ಜಾರಿ, ಕಾರ್ಮಿಕ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿ ನಗರದಲ್ಲಿ ಗುರುವಾರ ಸಿಐಟಿಯು ಸಹಿ ಸಂಗ್ರಹ ಚಳವಳಿ ಅಭಿಯಾನ ನಡೆಯಿತು. 
ರಾಜ್ಯದಲ್ಲಿ ಬೃಹತ್ ಸಂಖ್ಯೆಯಲ್ಲಿರುವ ಕಾರ್ಮಿಕರ ಬದುಕನ್ನು ರಕ್ಷಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಹೊಣೆಯಾಗಿದೆ. ಕಾರ್ಮಿಕರ ವಿಚಾರಗಳು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿರುವ ಕಾರಣ, ರಾಜ್ಯ ಸರ್ಕಾರ ಅಧಿಕಾರ ಬಳಸಿಕೊಂಡು ವೈಜ್ಞಾನಿಕ ಕನಿಷ್ಠ ವೇತನ ಜಾರಿಗೆ ತರಬಹುದು. 2025ರ ಏಪ್ರಿಲ್‌ನಲ್ಲಿ ಕನಿಷ್ಠ ವೇತನದಲ್ಲಿ ಕರಡು ಅಧಿಸೂಚನೆ ಹೊರಡಿಸಿದ್ದರೂ ಈವರೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ರಾಜ್ಯದಲ್ಲಿ ಕಾರ್ಮಿಕರಿಗೆ ನೀಡಬೇಕಾದ ವೈಜ್ಞಾನಿಕ ಕನಿಷ್ಠ ಕೂಲಿಯ ಅಂತಿಮ ಪ್ರಕಟಣೆ ಹೊರಡಿಸಬೇಕು. 
2017ರ ನಂತರ 9 ವರ್ಷಗಳಿಂದ ಮರು ವಿಮರ್ಶೆಯಾಗದಿರುವ ಕನಿಷ್ಠ ವೇತನವನ್ನು ಪೂರ್ವಾನ್ವಯವಾಗುವಂತೆ, ತುಟ್ಟಿ ಭತ್ಯೆಯೊಂದಿಗೆ, ವಲಯ 3ರಲ್ಲಿನ ಅಕುಶಲ ಕಾರ್ಮಿಕರಿಗೆ ಮಾಸಿಕ 31 ಸಾವಿರ ರೂ. ಕನಿಷ್ಠ ವೇತನ ನಿಗದಿಪಡಿಸಬೇಕು. 
ಪ್ರಕಟಿತ ಕನಿಷ್ಠ ವೇತನಕ್ಕಿಂತಲೂ ಕಡಿಮೆ ವೇತನ ಪಡೆಯುವ ಸರ್ಕಾರಿ, ಖಾಸಗಿ ವಲಯ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ನೌಕರರಿಗೆ ಹಾಗೂ ಎಲ್ಲ ಸ್ವರೂಪದ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕು. ಕಾರ್ಮಿಕರ ಪರವಾಗಿ ರಾಜ್ಯದ ತಿದ್ದುಪಡಿಗಳನ್ನು ಮಾಡಿದ ನಂತರ ನಿಯಮಾವಳಿಗಳನ್ನು ರೂಪಿಸಿ ಜಾರಿಗೆ ತರಬೇಕು. ಕಾಯಂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು. ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕೆಂದು ಆಗ್ರಹಿಸಿದರು. ಸಂಘಟನೆಯ ಪ್ರಮುಖರಾದ ಕರಿಯಪ್ಪ ನಾಯಕ, ಮರಿಸ್ವಾಮಿ, ಯಂಕಪ್ಪ, ಹೊನ್ನೂರಪ್ಪ, ನಾಗನಗೌಡ, ಮಲ್ಲಯ್ಯ ನಾಯಕ, ಇಬ್ರಾಹಿಂಸಾಬ್, ಶಂಕ್ರಪ್ಪ ದಾಸರ, ಬೀರಪ್ಪ, ವಿರುಪಣ್ಣ, ನಿಂಗಪ್ಪ, ರಂಜಾನ್ ಇದ್ದರು.