ರಾಯಚೂರು ತಾಲೂಕಿನ ದೇವಸುಗೂರಿನಲ್ಲಿ ಶ್ರೀ ಸೂಗೂರೇಶ್ವರ ರಥೋತ್ಸವ ಅದ್ದೂರಿಯಾಗಿ ಜರುಗಿತು.
- ದೇವಸುಗೂರು ಗ್ರಾಮದಲ್ಲಿ ಜಾತ್ರೋತ್ಸವ
- ತೇರಿಗೆ ಬಾಳೆಹಣ್ಣು, ಉತ್ತತ್ತಿ ತೂರಿ ಭಕ್ತಿ ಸಮರ್ಪಣೆ
ರಾಯಚೂರು: ತಾಲೂಕಿನ ದೇವಸುಗೂರು ಗ್ರಾಮದ ಆರಾಧ್ಯ ದೈವ ಶ್ರೀ ಸೂಗೂರೇಶ್ವರ ಜಾತ್ರೋತ್ಸವ ನಿಮಿತ್ತ ಬುಧವಾರ ಸಂಜೆ ಜೋಡು ರಥೋತ್ಸವ ಅದ್ದೂರಿಯಾಗಿ ಜರುಗಿತು.
ಜಾತ್ರೆ ನಿಮಿತ್ತ ಬೆಳಗ್ಗೆ ಸೂಗೂರೇಶ್ವರ ಸ್ವಾಮಿಗೆ ಮಹಾರುದ್ರಭಿಷೇಕ, ಮಹಾಪೂಜೆ, ಎಲೆಪೂಜೆ, ನಂದಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಸಂಜೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ಇರಿಸಿ ದೇವಾಲಯ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ಪಲ್ಲಕ್ಕಿಯೊಂದಿಗೆ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಬಳಿಕ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಜೋಡು ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ರಥ ಎಳೆಯುತ್ತಿದ್ದಂತೆ ಭಕ್ತರು ಬಾಳೆಹಣ್ಣು, ಉತ್ತತ್ತಿ ತೂರಿ ಭಕ್ತಿ ಸಮರ್ಪಿಸಿದರು. ಬಾಜಾ-ಭಜಂತ್ರಿ, ಕಲಾ ತಂಡಗಳು ರಥೋತ್ಸವಕ್ಕೆ ಮೆರುಗು ನೀಡಿದವು. ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ರಥೋತ್ಸವ ಕಣ್ತುಂಬಿಕೊಂಡರು.