ಸಿಂಧನೂರಿನ ಹಳೇ ಚಿಕನ್ ಮಾರ್ಕೆಟ್‌ನಲ್ಲಿದ್ದ ಶೆಡ್‌ಗಳಿಗೆ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿರುವುದು. 
ರಾಯಚೂರು

ಬೆಂಕಿಗೆ ಹೊತ್ತಿ ಉರಿದ ಅಂಗಡಿಗಳು

ನರೇಶ್ ಕುಮಾರ್
ಸಿಂಧನೂರು: ನಗರದ ರಾಯಚೂರು ರಸ್ತೆ ಕನಕದಾಸ ವೃತ್ತದ ಹಳೇ ಚಿಕನ್ ಮಾರ್ಕೆಟ್ ಬಳಿ ಗುರುವಾರ ಮಧ್ಯರಾತ್ರಿ ಬೆಂಕಿ ಅವಘಡ ಸಂಭವಿಸಿ ಐದು ಅಂಗಡಿಗಳು ಸುಟ್ಟಿದ್ದು, ಅಪಾರ ನಷ್ಟವಾಗಿದೆ. 
ಶೆಡ್ ನಿರ್ಮಿಸಿಕೊಂಡು ಹಗ್ಗದ ವ್ಯಾಪಾರ ಮಾಡುತ್ತಿದ್ದ ಕಾಳಪ್ಪ ಹಾಗೂ ಮಹ್ಮದ್ ಸುಲೇಮಾನ್, ಫಯಾಜ್ ಅವರ ಬಟ್ಟೆ ಅಂಗಡಿ, ಅನುರಾಗ್ ಎನ್ನುವವರ ದೆಹಲಿ ಬಜಾರ್, ಸೈಯದ್ ರಬ್ಬಾನಿ ಹಾಗೂ ಸೀತಾರ ಚಿಕನ್ ಅಂಗಡಿ ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ಮೊತ್ತದ ಸಾಮಗ್ರಿಗಳು ಸುಟ್ಟಿವೆ ಎನ್ನಲಾಗಿದೆ.
 ರಾತ್ರಿ ಏಕಾಏಕಿ ಅಂಗಡಿಗಳು ಧಗ ಧಗ ಹೊತ್ತಿ ಉರಿದಿದ್ದು, ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ, ಹೇಗೆ ಬೆಂಕಿ ತಗುಲಿತು ಎಂಬುದು ತಿಳಿದುಬಂದಿಲ್ಲ. 
ಸಾಲ ಮಾಡಿ ವ್ಯಾಪಾರ ಮಾಡುತ್ತಿದ್ದೆವು. ಹೇಗೋ ಬದುಕು ನಡೆಯುತ್ತಿತ್ತು. ಆದರೆ, ಅಗ್ನಿ ಅವಘಡದಿಂದ ಅಂಗಡಿಯ ಎಲ್ಲ ವಸ್ತುಗಳು ಸುಟ್ಟಿವೆ. ಮಾಡಿದ ಸಾಲ, ಕುಟುಂಬ ನಿರ್ವಹಣೆ ಹೇಗೆ ಎಂಬ ಚಿಂತೆ ಕಾಡುತ್ತಿದೆ ಎಂದು ಅಂಗಡಿ ಮಾಲೀಕರು ಅಳಲು ತೋಡಿಕೊಂಡರು.