13 ವರ್ಷಕ್ಕೆ ಒಮ್ಮೆ ಬರುವ ಶನೇಶ್ವರ ಜಯಂತಿ ನಿಮಿತ್ತ ಶನಿವಾರ ರಾಯಚೂರಿನ ಜವಾಹರ ನಗರದ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಕ್ತರಿಂದ ಶಾಂತಿ ಹೋಮ ನೆರವೇರಿಸಲಾಯಿತು.
ರಾಯಚೂರು
13 ವರ್ಷಕ್ಕೆ ಒಮ್ಮೆ ಬರುವ ಶನೇಶ್ವರ ಜಯಂತಿ ನಿಮಿತ್ತ ಶನಿವಾರ ನಗರದ ಜವಾಹರ ನಗರದ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಕ್ತರು ಬೆಳಗ್ಗೆಯಿಂದ ನಿರಂತರವಾಗಿ ಶಾಂತಿ ಹೋಮ ನೆರವೇರಿಸಿದರು.
ಶನೆಶ್ವರ ಸ್ವಾಮಿ ಜಯಂತಿಯ ಅಂಗವಾಗಿ ದೇಗುಲವನ್ನು ತಳಿರು ತೋರಣ ಹಾಗೂ ಹೂಗಳಿಂದ ಸಿಂಗರಿಸಲಾಗಿತ್ತು. ಮುಂಜಾನೆ ಬ್ರಾಹ್ಮಿ ಲಗ್ನದಲ್ಲಿ ಪುಣ್ಯ, ಬಳಿಕ ಮಹಾ ಸಂಕಲ್ಪ, ಪಂಚಾಮೃತ ಅಭಿಷೇಕ, ಗಣಹೋಮ, ವಾಸ್ತು ಹೋಮ, ನವಗ್ರಹ ಹೋಮ, ಆಂಜನೇಯಸ್ವಾಮಿ ಹೋಮ ಹಾಗೂ ಶನೆಶ್ವರಸ್ವಾಮಿ ಪ್ರಧಾನ ಹೋಮ, ಲಕ್ಷ್ಮೀ ನರಸಿಂಹ ಹೋಮ ಹಾಗೂ ಅನೇಕ ರಾಶಿ ಫಲಗಳಲ್ಲಿ ಶನಿ ದೋಷ ಇರುವಂತಹ ಭಕ್ತರು ಹಾಗೂ ಭಕ್ತರ ಸಂಕಷ್ಟಗಳಿಗೆ ಪರಿಹಾರಗಳನ್ನು ಒದಗಿಸುವ ಹೋಮ ನೇರವೇರಿಸಿದರು.
ಜತೆಗೆ ನಗರದ ಶನೇಶ್ವರ ದೇವಾಲಯಗಳಲ್ಲೂ ಬೆಳಗ್ಗೆಯಿಂದ ಶನೀಶ್ವರ ಹೋಮ ನಿರಂತರವಾಗಿ ನೆರವೇರಿಸಲಾಗುತ್ತಿದೆ. 13 ವರ್ಷಕ್ಕೆ ಒಮ್ಮೆ ಶನೇಶ್ವರ ಜಯಂತಿ ಬರುವುದರಿಂದ ಭಕ್ತರು, ಶನಿ ದೋಷ ಇರುವವರು ಶನೇಶ್ವರ ದೋಷ ಪರಿಹಾರಕ್ಕೆ ಮುಂದಾಗಿದ್ದಾರೆ.
ಸ್ವಾಮಿಯ ಜಯಂತಿ ಅಂಗವಾಗಿ ದೇವರ ಮೂರ್ತಿಗೆ ನಾನಾ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಬಳಿಕ ಸಂಜೆ 4 ಗಂಟೆ ವೇಳೆಗೆ ಸ್ವಾಮಿಗೆ ಪ್ರಿಯವಾದ ತೆಲದಿಂದ ಅಭಿಷೇಕವನ್ನು ನೆರವೇರಿಸಲಾಯಿತು. ಸಾರ್ವಜನಿಕರು ಹಾಜರಿದ್ದು ಸ್ವಾಮಿಯ ಮೂರ್ತಿಗೆ ತೆಲವನ್ನು ಎರೆದು ತಮ್ಮ ಮನದ ಪ್ರಾರ್ಥನೆಯನ್ನು ನಿವೇದಿಸಿಕೊಂಡರು. ಬಳಿಕ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಈ ವೇಳೆ ನೂರಾರು ಭಕ್ತಾಧಿಗಳು ಹಾಜರಿದ್ದರು.