ದೇವದುರ್ಗ ತಾಲೂಕು ಹಿರೇರಾಯಕುಂಪಿ ಅಗಸಿ ಮುಂದೆ ಗುಂಡಿಬಿದ್ದು ಚರಂಡಿ ನೀರು ನಿಂತಿರುವುದು. 
ರಾಯಚೂರು

ಹಿರೇರಾಯಕುಂಪಿಯಲ್ಲಿ ಚರಂಡಿ ದುರ್ನಾತ

ನರೇಶ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • ಮಿತಿಮೀರಿದ ಸೊಳ್ಳೆಗಳ ಹಾವಳಿ, ರೋಗದ ಭೀತಿ
  • ಶಾಸಕಿ ಸೂಚನೆಗೂ ಕ್ಯಾರೇ ಎನ್ನದ ಅಧಿಕಾರಿಗಳು
ದೇವದುರ್ಗ: ತಾಲೂಕಿನ ಶಾವಂತಗೇರಾ ಗ್ರಾಪಂಗೆ ಒಳಪಡುವ ಹಿರೇರಾಯಕುಂಪಿ ಗ್ರಾಮ ಕೊಳಚೆ ನೀರಿನ ಸಮಸ್ಯೆಯಿಂದ ನರಳುತ್ತಿದೆ. ಊರು ಪ್ರವೇಶ ಮಾಡುವ ಅಗಸಿ ಮುಂದೆ ಹೊಂಡ ನಿರ್ಮಾಣವಾಗಿ ಎರಡು ಅಡಿ ಚರಂಡಿ ನೀರು ನಿಲ್ಲುತ್ತಿದೆ. ಶಾಸಕಿ ಕರೆಮ್ಮ ನಾಯಕ ಭೇಟಿ ನೀಡಿ ಗುಂಡಿ ಮುಚ್ಚಲು ಸೂಚಿಸಿದ್ದರೂ ಅಧಿಕಾರಿಗಳು ಕವಡೆ ಕಿಮ್ಮತ್ತು ಕೊಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 
ಊರಿನ ಅಗಸಿ ಮುಂದೆ ಗುಂಡಿಬಿದ್ದು ಚರಂಡಿ ನೀರು ನಿಲ್ಲುತ್ತಿದೆ. ಅಲ್ಲದೆ ರಸ್ತೆ ಮೇಲೆಯೂ ನೀರು ಹರಿಯುತ್ತಿದ್ದು ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಸೊಳ್ಳೆಗಳ ಹಾವಳಿ ಮಿತಿಮೀರಿದ್ದು ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ಊರಿನ ಮೇಲ್ಭಾಗದ ಮಳೆ ಹಾಗೂ ಚರಂಡಿ ನೀರು ಅಗಸಿಗೆ ಹರಿದುಬರುತ್ತಿದೆ. ಮಹಿಳೆಯರು, ಮಕ್ಕಳು ಸೇರಿ ಜನರ ಓಡಾಟಕ್ಕೆ ತೀವ್ರ ಸಮಸ್ಯೆಯಾಗಿದೆ.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲು ಡಿ.1ರಂದು ಶಾಸಕಿ ಕರೆಮ್ಮ ನಾಯಕ ಭೇಟಿ ನೀಡಿದಾಗ ಗ್ರಾಮಸ್ಥರು ಅಗಸಿ ಮುಂದಿನ ಚರಂಡಿ ನೀರಿನ ಸಮಸ್ಯೆ ಬಗ್ಗೆ ನೋವು ತೋಡಿಕೊಂಡಿದ್ದರು. ಸ್ಥಳದಲ್ಲೇ ಇದ್ದ ತಾಪಂ ಇಒ ಬಸವರಾಜ ಹಟ್ಟಿ, ಪಿಡಿಒ ಸೈಯದ್ ಮತೀನ್‌ಗೆ ಸೂಚನೆ ನೀಡಿ ನೀರು ನಿಲ್ಲದಂತೆ ಕ್ರಮಕೈಗೊಳ್ಳಲು ಸೂಚಿಸಿದ್ದರು. ನಾಳೆಯೇ ಕ್ರಮಕೈಗೊಳ್ಳುತ್ತೇವೆ ಎಂದು ತಲೆ ಅಲ್ಲಾಡಿಸಿದ್ದ ಅಧಿಕಾರಿಗಳು, ಸೂಚನೆ ನೀಡಿ 15ದಿನಗಳಾದರೂ ಆಕಡೆ ತಿರುಗಿ ಸಹ ನೋಡಿಲ್ಲ. 
ಸಮಸ್ಯೆ ಇನ್ನೂ ಜೀವಂತವಿದ್ದು, ಶಾಸಕಿ ಮಾತಿಗೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಆರೋಪಿಸುವ ಗ್ರಾಮಸ್ಥರು, ಪಿಡಿಒ ಕಚೇರಿಗೆ ಬರುತ್ತಿಲ್ಲ, ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಇದರಿಂದ ಎಲ್ಲೆಂದರಲ್ಲಿ ಕೊಳಚೆ ನಿಂತು ನರಕಯಾತನೆ ಅನುಭವಿಸುತ್ತಿದ್ದೇವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರೇರಾಯಕುಂಪಿಯಲ್ಲಿ ಸುಮಾರು 400ಮನೆಗಳಿದ್ದು 1500 ಜನಸಂಖ್ಯೆಯಿದೆ. ಅಗಸಿ ರಸ್ತೆ ಊರಿನ ಸಂಪರ್ಕ ಕೊಂಡಿಯಾಗಿದ್ದು ಬಹುತೇಕರು ಇಲ್ಲೇ ಓಡಾಡುತ್ತಾರೆ. ಸೈಕಲ್, ಬೈಕ್ ಮೇಲೆ ಹೋಗುವಾಗ ವಿದ್ಯಾರ್ಥಿಗಳು, ಯುವಕರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಅಧಿಕಾರಿಗಳು ಆಡಿದ್ದೇ ಆಟ

ಶಾವಂತಗೇರಾ ಗ್ರಾಪಂಗೆ 15 ವರ್ಷಗಳಿಂದ ಚುನಾವಣೆಯೇ ನಡೆದಿಲ್ಲ. ಗ್ರಾಪಂ ಪುನರ್ವಿಂಗಡಣೆ ಸಂದರ್ಭದಲ್ಲಿ ಕೆಲವರು ಕಲಬುರಗಿ ಸಂಚಾರಪೀಠದಲ್ಲಿ ದಾವೆ ಹೂಡಿದ್ದಾರೆ. ಹೀಗಾಗಿ 15 ವರ್ಷಗಳಿಂದ ಗ್ರಾಪಂ ಸದಸ್ಯರು ಸೇರಿ ಆಡಳಿತ ಮಂಡಳಿಯೇ ರಚನೆಯಾಗಿಲ್ಲ. ಹೀಗಾಗಿ ಅಧಿಕಾರಿಗಳು ಆಡಿದ್ದೇ ಆಟ. ಜನರ ಸಮಸ್ಯೆ ಯಾರೂ ಕೇಳುತ್ತಿಲ್ಲ. ಪಿಡಿಒ ಸರಿಯಾಗಿ ಕಚೇರಿಗೆ ಬರುತ್ತಿಲ್ಲ. ಗ್ರಾಮದಲ್ಲಿ ಚರಂಡಿ, ಸಿಸಿ ರಸ್ತೆ ನಿರ್ಮಾಣಕ್ಕೆ ಅನುದಾನ ಬಂದರೂ ಕಾಮಗಾರಿ ಆರಂಭಿಸಿಲ್ಲ. ಕೆಲಸ ಯಾವಾಗಾದ್ರೂ ಮಾಡಿ ಅಗಸಿಮುಂದೆ ನೀರು ನಿಲ್ಲದಂತೆ ಮರಂ ಹಾಕಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
"

ಹಿರೇರಾಯಕುಂಪಿ ಪೂರ್ತಿ ಒಳಚರಂಡಿ, ಸಿಸಿ ರಸ್ತೆ ಮಾಡಲು 2ಕೋಟಿ ರೂ. ಮಂಜೂರಾಗಿ ಟೆಂಡರ್ ಆಗಿದೆ. ಗುತ್ತಿಗೆದಾರರು ಎರಡುಕಡೆ ತಗ್ಗು ತೋಡಿ ಹಾಗೇ ಬಿಟ್ಟಿದ್ದಾರೆ. ತುರ್ತು ಕೆಲಸ ಮಾಡಲು ನೋಟಿಸ್ ನೀಡಲಾಗಿದೆ. 30ಕಡೆ ಚರಂಡಿ, ಸಿಸಿ ರಸ್ತೆ ಮಾಡಬೇಕು. ಗುತ್ತಿಗೆದಾರರಿಗೆ ಸೂಚನೆ ನೀಡಲಾಗುತ್ತದೆ. ಕೆಲಸ ಮಾಡದಿದ್ದರೆ ಬ್ಲಾೃಕ್ ಲಿಸ್ಟ್‌ಗೆ ಹಾಕಲು ಶಿಫಾರಸು ಮಾಡುತ್ತೇನೆ.

"

ಕರೆಮ್ಮ ನಾಯಕ ಶಾಸಕಿ ಆಗುವ ಮುನ್ನವೇ ಊರಿಗೆ ಬಂದು ಸಮಸ್ಯೆ ನೋಡಿಕೊಂಡು ಹೋಗಿದ್ದಾರೆ. ಮೊನ್ನೆ ಭೂಮಿಪೂಜೆ ಮಾಡಲು ಬಂದಾಗಲೂ ಇದೇ ಸಮಸ್ಯೆ ನೋಡಿ ಅಧಿಕಾರಿಗಳಿಗೆ ಸರಿಪಡಿಸಲು ಸೂಚಿಸಿದ್ದಾರೆ. ಆದರೆ ದಪ್ಪಚರ್ಮದ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಪಿಡಿಒ ನಮ್ಮ ಪಾಲಿಗೆ ಇದ್ದೂ ಇಲ್ಲದಂತಿದ್ದು, ಗ್ರಾಪಂ ಆಡಳಿತ ಮಂಡಳಿ ಇಲ್ಲದೆ ನಾವು ಅನಾಥರಾಗಿದ್ದೇವೆ.