ಲಿಂಗಸುಗೂರಿನಲ್ಲಿ ರೇಷ್ಮೆ ಬೆಳೆಗಾರರಿಗೆ ಶಾಸಕ ಮಾನಪ್ಪ ವಜ್ಜಲ್ ಸೋಮವಾರ ಕೃಷಿ ಸಾಮಗ್ರಿ ವಿತರಿಸಿದರು.ರೇಷ್ಮೆ ವಿಸ್ತರಣಾಧಿಕಾರಿ ಸತೀಶ್ ಕೆ., ರೇಷ್ಮೆ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ ಪಾಟೀಲ್, ಗಿರಿಮಲ್ಲನಗೌಡ ಪಾಟೀಲ್ ಇತರರಿದ್ದರು. 
ರಾಯಚೂರು

ರೇಷ್ಮೆ ಬೆಳೆಗಾರರು ಸೌಲಭ್ಯ ಪಡೆಯಲಿ

ಶಾಮಸುಂದರ್ ಕೊಪ್ಪಳಕರ್

ಪ್ರಮುಖ ಮುಖ್ಯಾಂಶಗಳು

  • ಲಿಂಗಸುಗೂರಿನಲ್ಲಿ ರೈತರಿಗೆ ಕೃಷಿ ಸಲಕರಣೆಗಳ ವಿತರಣೆ ಮಾಡಿದ ಎಂಎಲ್‌ಎ
ಲಿಂಗಸುಗೂರು: ನಮ್ಮ ಭಾಗದಲ್ಲಿ ರೇಷ್ಮೆ ಬೆಳೆಗಾರರು ಸಾಕಷ್ಟಿದ್ದಾರೆ. ರೇಷ್ಮೆ ಕೃಷಿ ಅಭಿವೃದ್ಧಿ ಪಡಿಸಲು ಕೇಂದ್ರ ಪುರಸ್ಕೃತ ಸಮಗ್ರ ಯೋಜನೆಯಡಿ ರೈತರಿಗೆ ಸಹಾಯಧನದಲ್ಲಿ ಸಲಕರಣೆಗಳನ್ನು ನೀಡುತ್ತಿದ್ದು, ಸದುಪಯೋಗ ಪಡೆಯಬೇಕು ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ರೇಷ್ಮೆ ಕೃಷಿ ವಿಸ್ತರಣಾಧಿಕಾರಿಗಳ ತಾಂತ್ರಿಕ ಸೇವಾ ಕೇಂದ್ರದಿಂದ ರೇಷ್ಮೆ ಬೆಳೆಗಾರರಿಗೆ ಸಲಕರಣೆ ಗಳನ್ನು ವಿತರಿಸಿ ಸೋಮವಾರ ಮಾತನಾಡಿದರು. ಸೋಲಾರ್, ಡೀಸೆಲ್ ಸ್ಪ್ರೇಯರ್, ಗ್ರಾಸ್ ಕಟರ್, ಪ್ರೋನರ್ ಕರೆಂಟ್, ಬ್ಯಾಟರಿ ಸ್ಪೇಯರ್, ಪವರ್ ಸ್ಪೇಯರ್ ಮುಂತಾದ ಉಪಕರಣಗಳನ್ನು ಎಸ್ಸಿ-ಎಸ್ಟಿ ರೈತರಿಗೆ ಶೇ.90, ಸಾಮಾನ್ಯ ವರ್ಗದವರಿಗೆ ಶೇ.70 ಸಹಾಯಧನದಲ್ಲಿ ವಿತರಿಸಲಾಗುತ್ತಿದೆ. ಇದರಿಂದ ಹೆಚ್ಚಿನ ಕ್ಷೇತ್ರಗಳಲ್ಲಿ ರೇಷ್ಮೆ ಕೃಷಿ ಮಾಡಲು ಅನುಕೂಲವಾಗಲಿದೆ ಎಂದರು.
ರೇಷ್ಮೆ ವಿಸ್ತರಣಾಧಿಕಾರಿ ಸತೀಶ್ ಕೆ., ರೇಷ್ಮೆ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ ಪಾಟೀಲ್, ಬಿಜೆಪಿ ಮುಖಂಡರಾದ ಗಿರಿಮಲ್ಲನಗೌಡ ಪಾಟೀಲ್, ವೆಂಕನಗೌಡ ಐದನಾಳ, ಶರಣಪ್ಪ ಗೋನವಾರ ಇತರರಿದ್ದರು.
ತರಬೇತಿಗೆ ಮನವಿ: ರೇಷ್ಮೆ ಬೆಳೆಗಳಿಗೆ ರೋಗ ಕಾಟ ಹೆಚ್ಚಾಗಿದ್ದು ಪಾಲನೆ ಪೋಷಣೆಗೆ ಕೃಷಿ ವಿಜ್ಞಾನಿಗಳಿಂದ ರೈತರಿಗೆ ತರಬೇತಿ ನೀಡಬೇಕು ಎಂದು ಆಗ್ರಹಿಸಿ ಲಿಂಗಸುಗೂರು, ಮಸ್ಕಿ ತಾಲೂಕು ರೇಷ್ಮೆ ಬೆಳೆಗಾರರ ಸಂಘದಿಂದ ಶಾಸಕ ಮಾನಪ್ಪ ವಜ್ಜಲ್‌ಗೆ ಮನವಿ ಸಲ್ಲಿಸಲಾಯಿತು.
ರೇಷ್ಮೆ ಬೆಳೆಗಾರರಿಗೆ ಅಗತ್ಯವಿರುವ ಸುಣ್ಣ, ಬ್ಲೀಚಿಂಗ್ ಪೌಡರ್ ಹಾಗೂ ಇತರ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಬೇಕು. ಬೇಡಿಕೆಗೆ ತಕ್ಕಂತೆ ಚಂದ್ರಿಕೆಗಳನ್ನು ಪೂರೈಸಬೇಕು. ಸೋಂಕು ನಿವಾರಕ ಔಷಧ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಬೇಕು. ಇದಕ್ಕೂ ಮುನ್ನ ರೈತರೊಂದಿಗೆ ಚರ್ಚಿಸಬೇಕೆಂದು ಒತ್ತಾಯಿಸಿದರು.
ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ ಪಾಟೀಲ, ರಮೇಶಗೌಡ, ನಾಗನಗೌಡ, ಪಂಪಣ್ಣ, ಆದಪ್ಪ, ನಾಗರಾಜ, ಗದ್ದೆಪ್ಪ, ಸುರೇಶ, ದೇವಪ್ಪ, ಹನುಮಂತ, ಗಂಗಪ್ಪ, ಇತರರಿದ್ದರು.