ದೇವದುರ್ಗದಲ್ಲಿ ಆಯೋಜಿಸಿದ್ದ ಸ್ಕೌಟ್ಸ್ ಗೇಟ್ಸ್ ಪರೀಕ್ಷಾ ಶಿಬಿರದಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಾಂತೇಶ್ ಮಸ್ಕಿ, ಶಿಕ್ಷಣ ಪ್ರೇಮಿ ಬಸವಂತರಾಯ ಕುರಿ ಅವರನ್ನು ಸನ್ಮಾನಿಸಲಾಯಿತು.
- ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ ಅಭಿಮತ
ದೇವದುರ್ಗ: ಶಾಲಾ ಕಾಲೇಜು ಹಂತದಿಂದಲೇ ಮಕ್ಕಳಲ್ಲಿ ಶಿಸ್ತು, ಸಮಯ ಪಾಲನೆ ಹಾಗೂ ರಾಷ್ಟ್ರೀಯ ಭಾವನೆ ಮೂಡಿಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಾದರಿಯಾಗಿದೆ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಾಂತೇಶ್ ಮಸ್ಕಿ ಹೇಳಿದರು.
ಪಟ್ಟಣದ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪರೀಕ್ಷೆ ಶಿಬಿರ ಉದ್ಘಾಟಿಸಿ ಭಾನುವಾರ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು, ಸಮಯ ಪಾಲನೆ ಹಾಗೂ ದೇಶದ ಬಗ್ಗೆ ಗೌರವ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ ಶಿಬಿರಗಳು ಸಹಕಾರಿಯಾಗಿವೆ. ಶಿಬಿರದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು.
ತರಬೇತಿದಾರರು ಹಾಗೂ ಮಾರ್ಗದರ್ಶಕರು ನೀಡುವಂತಹ ಸಲಹೆಗಳನ್ನು ತಪ್ಪದೆ ಪಾಲಿಸುವ ಮೂಲಕ ಜೀವನವನ್ನು ಶಿಸ್ತು ಬದ್ಧವಾಗಿ ರೂಪಿಸಿಕೊಳ್ಳಬೇಕು. ಮಹನೀಯರ ಆದರ್ಶಗಳನ್ನು ಅಳವಡಿಸಿಕೊಂಡು ಗುರಿ ತಲುಪಲು ನಿರಂತರ ಶ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಪ್ರೇಮಿ ಬಸವಂತರಾಯ ಕುರಿ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್, ಪ್ರಮುಖರಾದ ಬಸವರಾಜ್ ಬೋರಡ್ಡಿ, ರಂಗನಾಥ್ ಛಲವಾದಿ, ತಿರುಪತಿ ಸೂಗೂರು, ಶಿವರಾಜ್ ಪೂಜಾರಿ, ಶಶಿಕಾಂತ್ ದೇಸಾಯಿ, ನಾಗಭೂಷಣ್, ಶ್ರೀನಿವಾಸ್, ಕವಿತಾ, ಗಂಗಮ್ಮ, ಬಸಮ್ಮ ಹಿರೇಮಠ, ಶಾಂತಮ್ಮ, ಅಂಬಣ್ಣ ನಾಯಕ ಇತರರಿದ್ದರು.