ಅರಳಹಳ್ಳಿ ಗ್ರಾಮದಲ್ಲಿ ಭಾನುವಾರ ಸರ್ಕಾರಿ ಪ್ರೌಢಶಾಲೆ ಕಟ್ಟಡವನ್ನು ಶಾಸಕ ಆರ್.ಬಸನಗೌಡ ತುರ್ವಿಹಾಳ ಉದ್ಘಾಟಿಸಿದರು. ಕೆಪಿಸಿಸಿ ಸದಸ್ಯ ವೆಂಕಟೇಶ್ವರ ನಲ್ಲಾ, ಚಂದ್ರಶೇಖರ ಪೊಪಾ, ರವಿಗೌಡ ಮಲ್ಲದಗುಡ್ಡ, ಶೇಖರಗೌಡ ವಿರುಪಾಪುರ, ಭೀಮಣ್ಣ ಉಪ್ಪಲದೊಡ್ಡಿ ಇತರರಿದ್ದರು.
- ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿಕೆ
- ಅರಳಹಳ್ಳಿಯಲ್ಲಿ ಸರ್ಕಾರಿ ಹೈಸ್ಕೂಲ್ ಉದ್ಘಾಟನೆ
ಸಿಂಧನೂರು: ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಆದ್ಯತೆಯಾಗಿದೆ. ಹೀಗಾಗಿ ಸರ್ಕಾರಿ ಶಾಲೆಗಳಿಗೆ ಸುಸಜ್ಜಿತ ಕಟ್ಟಡ ಸೇರಿ ಮೂಲಸೌಕರ್ಯ ಒದಗಿಸಲಾಗುತ್ತಿದೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ಅರಳಹಳ್ಳಿ ಗ್ರಾಮದಲ್ಲಿ ಭಾನುವಾರ ಕೆಕೆಆರ್‌ಡಿಬಿ ಯೋಜನೆಯಿಂದ ಒಂದು ಕೋಟಿ ರೂ. ವೆಚ್ಚದ ನೂತನ ಸರ್ಕಾರಿ ಪ್ರೌಢ ಶಾಲೆ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಈಗ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವ್ಯವಸ್ಥೆ ಜಾರಿಗೊಳಿಸಿದೆ. ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಗಮನಹರಿಸುತ್ತಿದೆ. ನಮ್ಮ ಕ್ಷೇತ್ರದ ಶಾಲೆಗಳಿಗೂ ಕಟ್ಟಡ, ಮೂಲಸೌಲಭ್ಯ ಭಾಗ್ಯ ನೀಡಲಾಗಿದೆ. ಶಿಕ್ಷಕರ ಕೊರತೆ ನಿವಾರಣೆಯಾದರೆ ಸರ್ಕಾರಿ ಶಾಲೆಗಳಿಗೆ ಇನ್ನಷ್ಟು ಬಲ ಬರಲಿದೆ. ಈಗಾಗಲೇ ಅಗತ್ಯಕ್ಕೆ ತಕ್ಕಂತೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿ, ಸಮಸ್ಯೆ ಸರಿದೂಗಿಸಲಾಗಿದೆ ಎಂದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಪಾತ್ರವೂ ಹಿರಿದಾಗಿದೆ. ಗ್ರಾಮದ ಈಶ್ವರಮ್ಮ ಅಮರಣ್ಣ ಅವರು ಸ್ಥಳ ದಾನ ಮಾಡುವ ಮೂಲಕ ಇಂದು ಮಕ್ಕಳಿಗೆ ಸುಸಜ್ಜಿತ ಕಟ್ಟಡ ಕಟ್ಟಲು ಸಾಧ್ಯವಾಗಿದೆ. ಅವರ ಕಾರ್ಯ ಮಾದರಿಯಾಗಿದೆ ಎಂದರು.
ಪ್ರಮುಖರಾದ ಹುಲುಗಪ್ಪ, ನಿಂಗಪ್ಪ ಅರಗಿ, ಸುರೇಶಸ್ವಾಮಿ, ಶಿವರಾಜ ಅರಗಿ, ಸಿದ್ದನಗೌಡ ಮಲ್ಲಾಪುರ, ವೀರಭದ್ರಗೌಡ ಉಮಲೂಟಿ, ಪಂಪನಗೌಡ ಜಾಲಿಹಾಳ, ಶಂಕರಗೌಡ, ತಿಪ್ಪಣ್ಣ ಹೊಸಮನಿ, ಗುತ್ತಿಗೆದಾರ ಶರಣೇಗೌಡ, ಪಿಎಸ್‌ಐ ಸುಜಾತಾ, ನಿರುಪಾದೆಪ್ಪ ಗುಡಿಹಾಳ, ಭೀಮಣ್ಣ ಉಪ್ಪಲದೊಡ್ಡಿ, ಅಮರೇಗೌಡ ಮಲ್ಲಾಪುರ, ಅರಣ್ಯಾಧಿಕಾರಿ ಮಲ್ಲಿಕಾ ಹಿರೇಮಠ, ಹನುಮೇಶ ಬಾಗೋಡಿ, ಮುಖ್ಯಶಿಕ್ಷಕ ಬಸವರಾಜ ಬಿಳೆಕಲ್ ಇದ್ದರು.