ರಾಯಚೂರು
ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಮಂತ್ರಾಲಯದ ಶ್ರೀ ರಾಘವೆಂದ್ರ ಮಠದಲ್ಲಿ ಆ.27 ರಿಂದ ಸೆ.2 ರವರೆಗೆ ನಡೆಯುವ ಸಪ್ತರಾತ್ರೋತ್ಸವಕ್ಕೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಗುರುವಾರ ಸಂಜೆ ಧ್ವಜಾರೋಹಣ, ಗೋಪೂಜೆ, ಅಶ್ವಪೂಜೆ ಹಾಗೂ ಧಾನ್ಯೋತ್ಸವದೊಂದಿಗೆ ಆರಾಧನೆಗೆ ಚಾಲನೆ ನೀಡಲಿದ್ದಾರೆ.
ಆ.28ರಂದು ಶ್ರೀಮಠದ ಪುಷ್ಕರಣಿಯಲ್ಲಿ ತೆಪ್ರೋತ್ಸವ, ಉತ್ಸವ ಮೆರವಣಿಗೆ, ದೀಪೋತ್ಸವ ಮತ್ತು ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ಆ.29ರಂದು ಪೂರ್ವಾರಾಧನೆ ನಿಮಿತ್ತ ತಿರುಮಲ ತಿರುಪತಿ ದೇವಸ್ಥಾನದ ಶೇಷವಸ್ತ್ರ ಪ್ರಸಾದ, ತಮಿಳುನಾಡಿನ ಶ್ರೀರಂಗನಾಥಸ್ವಾಮಿ ದೇಗುಲದ ವಸ್ತ್ರ ಹಾಗೂ ಕಂಚಿಯ ವರದರಾಜ ದೇವಸ್ಥಾನದ ದೇವರ ವಸ್ತ್ರವನ್ನು ರಾಯರಿಗೆ ಸಮರ್ಪಿಸಿ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಗುತ್ತದೆ.
ಜತೆಗೆ ಸಂಜೆ ‘‘ಯೋಗೀಂದ್ರ ಸಭಾ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಮಠದ ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ನಗರಹಳ್ಳಿ ವಾದಿರಾಜಾಚಾರ್ಯ ಮತ್ತು ತಂಜಾವೂರಿನ ಶಾಸ್ತ್ರ ವಿಶ್ವವಿದ್ಯಾಲಯದ ಉಪ ಕುಲಪತಿ ಸುಬ್ರಮಣಿಯನ್ ಅವರಿಗೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.’’
ಆ.30ರಂದು ಮಧ್ಯಾರಾಧನೆ ನಿಮಿತ್ತ ರಾಯರಿಗೆ ವಿಶೇಷ ಪಂಚಾಮೃತ ಅಭಿಷೇಕ, ಮಠದ ಪ್ರಾಂಗಣದಲ್ಲಿ ಸುವರ್ಣ ರಥೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಹಾಮಂಗಳಾರತಿ ನೆರವೇರಲಿದೆ.
ಆ.31 ರಂದು ಉತ್ತರಾರಾಧನೆಯ ದಿನ ರಾಯರ ಬೃಂದಾವನಕ್ಕೆ ನವರತ್ನ ಕವಚ ಸಮರ್ಪಣೆ, ಮಹಾರಥೋತ್ಸವ ಮತ್ತು ಭಕ್ತರಿಂದ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ನಡೆಯಲಿದೆ. ಸೆ.1ರಂದು ಸುಜ್ಞಾನೇಂದ್ರ ತೀರ್ಥರ ಆರಾಧನಾ ಕಾರ್ಯಕ್ರಮ ಹಾಗೂ ಸೆ.2ರಂದು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಪ್ತರಾತ್ರೋತ್ಸವವು ಸಮಾರೋಪಗೊಳ್ಳಲಿದೆ.
ಎಂದಿನಂತೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮುಸುವ ಹಿನ್ನಲೆಯಲ್ಲಿ ಶ್ರೀಮಠದ ಭಕ್ತರಿಗಾಗಿ ಕುಡಿಯುವ ನೀರು, ಆಂಬ್ಯುಲೆನ್ಸ್ ಹಾಗೂ ಭಕ್ತರಿಗೆ ಬ್ಯಾಟರಿ ಚಾಲಿತ ವಾಹನಗಳ ಸೌಲಭ್ಯ ಕಲ್ಪಿಸಲಾಗಿದೆ.
ಆರಾಧನೆಗೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನದಿ ತೀರದಲ್ಲಿ ಪುಣ್ಯಸ್ನಾನಕ್ಕಾಗಿ ಶವರ್ ಅಳವಡಿಕೆ, ನೂರಾರು ಶೌಚಗೃಹಗಳ ವ್ಯವಸ್ಥೆ ಹಾಗೂ ಸಂಚಾರ ದಟ್ಟಣೆ ನಿವಾರಣೆಗೆ ಪ್ರತ್ಯೇಕ ಆಟೋ ಸ್ಟ್ಯಾಂಡ್ ಮಾಡಲಾಗಿದೆಂದು ಶ್ರೀಮಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.