ದೇವದುರ್ಗ ತಾಲೂಕು ಅಮರಾಪುರ ಗ್ರಾಪಂನಲ್ಲಿ ಸ್ವಚ್ಛತಾ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ನಡೆಯಿತು. 
ರಾಯಚೂರು

ಸ್ವಚ್ಛತಾ ಸಿಬ್ಬಂದಿಯೇ ಸಮಾಜದ ವೈದ್ಯರು

ದೇವದುರ್ಗ: ವೈದ್ಯರು ರೋಗ ಬಂದಾಗ ಚಿಕಿತ್ಸೆ ನೀಡಿ ಗುಣಪಡಿಸಿದರೆ ಗ್ರಾಪಂ ಸ್ವಚ್ಛತಾ ಸಿಬ್ಬಂದಿ ಊರುಗಳಲ್ಲಿ ಸ್ವಚ್ಛತೆ ಕಾಪಾಡಿ ರೋಗ ಬಾರದಂತೆ ತಡೆಯಲು ಶ್ರಮಿಸುವ ವೈದ್ಯರು ಇದ್ದಂತೆ. ಸ್ವಚ್ಛತಾ ಸಿಬ್ಬಂದಿ ಕಾಯಕವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ವಿಬಿ ಜಿ ರಾಮ್ ಜಿ ಯೋಜನೆ ತಾಲೂಕು ಸಹಾಯಕ ನಿರ್ದೇಶಕ ಅಣ್ಣರಾವ್ ನಾಯಕ ಹೇಳಿದರು.

ಅಮರಾಪುರ ಗ್ರಾಪಂ ಸಭಾಣಂಗಣದಲ್ಲಿ ಸ್ವಚ್ಛ ಭಾರತ್ ಮಿಷನ್‌ನಡಿ ಗ್ರಾಪಂ ಸ್ವಚ್ಛತಾ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಬುಧವಾರ ಮಾತನಾಡಿದರು. ಸ್ವಚ್ಛ ವಾಹಿನಿ ವಾಹನ ಚಾಲಕರು, ಕಸ ಗುಡಿಸುವವರು, ಕಸ ವಿಭಜಕರ ಕಾರ್ಯ ಶ್ಲಾಘನೀಯ ಎಂದರು.
ನಿತ್ಯ ಸ್ವಚ್ಛತಾ ಕಾರ್ಯನಿರ್ವಹಣೆ ಕುರಿತು ತರಬೇತಿ ಹಾಗೂ ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದ್ದು, ಕೆಲಸದಲ್ಲಿ ಬಳಕೆ ಮಾಡಿಕೊಂಡು ಹಳ್ಳಿಗಳ ಸ್ವಚ್ಛತೆ ಕಾಪಾಡಬೇಕು. ಸ್ವಚ್ಛತೆ ಸಂದರ್ಭದಲ್ಲಿ ವೈಯಕ್ತಿಕ ಆರೋಗ್ಯದ ಕಡೆ ಗಮನ ಕೊಡಬೇಕು. ಕಸವನ್ನು ಮೂಲದಲ್ಲೇ ಹಸಿ ಮತ್ತು ಒಣ ಕಸವಾಗಿ ವಿಂಗಡಿಸಬೇಕು. ನಿಯಮಿತವಾಗಿ ಕಸ ಸಂಗ್ರಹಿಸಬೇಕು. ಬಳಕೆದಾರರ ಶುಲ್ಕ ಸಂಗ್ರಹಣೆ ಮಾಡಬೇಕು. ಸ್ವಚ್ಛತಾ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಘನ ತ್ಯಾಜ್ಯ ನಿರ್ವಹಣೆ ಹಾಗೂ ಸಂಬಂಧಿತ ಕಾಯ್ದೆ ಮತ್ತು ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.