ದೇವದುರ್ಗ ತಾಪಂ ಸಭಾಂಗಣದಲ್ಲಿ ಶಾಸಕಿ ಕರೆಮ್ಮ ಜಿ.ನಾಯಕ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು. ಜಿಪಂ ಯೋಜನಾಧಿಕಾರಿ ಶರಣ ಬಸವರಾಜ, ಅರಕೇರಾ ತಹಸೀಲ್ದಾರ್ ಅಮರೇಶ ಬಿರಾದಾರ್, ತಾಪಂ ಇಒ ಬಸವರಾಜ ಹಟ್ಟಿ, ಅಣ್ಣರಾವ್ ನಾಯಕ ಇದ್ದರು.
- ಕೆಡಿಪಿ
- ಸಭೆಯಲ್ಲಿ
- ಗಂಭೀರ ಚರ್ಚೆ
ದೇವದುರ್ಗ: ಕೃಷ್ಣಾ ನದಿಯಿಂದ ಪರವಾನಗಿ ಇಲ್ಲದೇ ಅನಧಿಕೃತವಾಗಿ ಮರಳು ಸಾಗಣೆಯಾಗುತ್ತಿದೆ. ಆದರೆ ಬಡವರು ಮನೆಕಟ್ಟಿಕೊಳ್ಳಲು, ರಿಪೇರಿ ಮಾಡಲು ಸಿಗುತ್ತಿಲ್ಲ. ವಿವಿಧ ಯೋಜನೆಯಡಿ ಮನೆ ನಿರ್ಮಾಣ, ರಿಪೇರಿ ಕೆಲಸಕ್ಕಾಗಿ ಮೊದಲ ಆದ್ಯತೆಯಾಗಿ ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಣೆಗೆ ಅವಕಾಶ ನೀಡಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಶಾಸಕಿ ಕರೆಮ್ಮಜಿ.ನಾಯಕ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಸೋಮವಾರ ಮಾತನಾಡಿದರು.
ಮರಳು ನೀತಿ ಬಗ್ಗೆ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಿಮ್ಮ ನೀತಿಗಳು, ಅಕ್ರಮ ದಂಧೆಯಿಂದ ಮರಳು ಅಭಾವ ಸೃಷ್ಟಿಯಾಗಿದೆ. ವಸತಿ ಯೋಜನೆ ಫಲಾನುಭವಿಗಳು ಮರಳು ಸಿಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಹೆಚ್ಚಿನ ಹಣ ನೀಡಿ ಮರಳು ಖರೀದಿಸುವ ಸ್ಥಿತಿಯಿದೆ. ಹೊಸಟೆಂಡರ್ ಕರೆದರೂ ಮರಳು ಸಾಗಣೆಗೆ ಅವಕಾಶ ನೀಡಿಲ್ಲ. ಕೃತಕ ಅಭಾವ ಸೃಷ್ಟಿಸಿ ಮರಳು ಅಕ್ರಮವಾಗಿ ಸಾಗಿಸುವ ಶಂಕೆಯಿದೆ. ಟ್ರ್ಯಾಕ್ಟರ್‌ನಲ್ಲಿ ಸ್ಥಳೀಯವಾಗಿ ಸಾಗಣೆಗೆ ಪರವಾನಗಿ ಕೊಡಬೇಕು ಎಂದು ಸೂಚಿಸಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಗೋಪಿನಾಥ ಮಾತನಾಡಿ, ಸರ್ಕಾರ ಹೊಸ ಟೆಂಡರ್‌ನಡಿ 21ಬ್ಲಾಕ್‌ಗಳಿಗೆ ಗುತ್ತಿಗೆ ನೀಡಿದೆ. ದಾಖಲೆ ಪರಿಶೀಲನೆ, ತಾಂತ್ರಿಕ ಸಮಸ್ಯೆಯಿಂದ ಸಾಗಣೆಗೆ ಇನ್ನು ಅವಕಾಶ ನೀಡಿಲ್ಲ. ಹೇರುಂಡಿ, ಕರ್ಕಿಹಳ್ಳಿ, ಹಿರೇರಾಯಕುಂಪಿಯಲ್ಲಿ ಮರಳು ಸ್ಟಾಕ್, ಸಾಗಣೆ ಪರವಾನಗಿ ಇದೆ. ಮರಳು ಮಿತ್ರ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಿದವರಿಗೆ ಮರಳು ನೀಡಲಾಗುವುದು ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಶರಣಗೌಡ ಮಾಲಿಪಾಟೀಲ್ ಮಾತನಾಡಿ, ಸಭೆಗೆ ತಪ್ಪು ಮಾಹಿತಿ ನೀಡಬೇಡಿ. ಹಿರೇರಾಯಕುಂಪಿಯಲ್ಲಿ ಮರಳು ಯಾರ್ಡ್ ಇಲ್ಲವೇಇಲ್ಲ. ಅಲ್ಲಿನ ಜಿಪಿಎಸ್ ಫೋಟೋ ತೋರಿಸಿ, ಮರಳಿನ ಅಭಾವದ ಬಗ್ಗೆ ಜನರು ಅಧಿಕಾರಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಸಮರ್ಪಕ ಮಾಹಿತಿ ನೀಡಿ ಸಭೆಯ ಘನತೆ ಕಾಪಾಡಿಕೊಳ್ಳಬೇಕು ಎಂದು ತರಾಟೆ ತೆಗೆದುಕೊಂಡರು.
ನಂಬರ್ ಪ್ಲೇಟ್ ಇಲ್ಲದೆ ನೂರಾರು ಟಿಪ್ಪರ್‌ಗಳು ತಾಲೂಕಿನಲ್ಲಿ ಓಡಾಡುತ್ತಿವೆ. ನೀವು ಏನು ಮಾಡುತ್ತಿದ್ದೀರಿ. ಅವುಗಳಿಗೆ ಪ್ಲೇಟ್‌ಯಾಕೆ ಹಾಕಿಲ್ಲ. ಚೆಕ್‌ಪೋಸ್ಟ್ ಜಾಗೃತಿಗೊಳಿಸಿ ಸಿಸಿ ಕ್ಯಾಮರಾ ಸರಿಯಾಗಿ ನಿರ್ವಹಣೆ ಮಾಡಬೇಕು. ಮರಳು ನಿಗ್ರಹ ಸಮಿತಿ ಸರಿಯಾಗಿ ಕೆಲಸ ಮಾಡಬೇಕು. ಅಲ್ಲದೆ ಅರಕೇರಾದಲ್ಲಿ ಕಂಕರ್ ಮಿಷನ್ ಅರಣ್ಯಭೂಮಿ ಒತ್ತುವರಿ ಮಾಡಿ ಗಣಿಗಾರಿಕೆ ಮಾಡುತ್ತಿದೆ. ಅರಣ್ಯ ಇಲಾಖೆ, ಭೂ ಮತ್ತು ಗಣಿವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಸರ್ಕಾರಕ್ಕೆ ದೂರು ನೀಡಲಾಗುವುದು ಎಂದು ಕರೆಮ್ಮ ಜಿ.ನಾಯಕ ಎಚ್ಚರಿಸಿದರು.
ಜಿಪಂ ಯೋಜನಾಧಿಕಾರಿ ಶರಣಬಸವರಾಜ, ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಅರಕೇರಾ ತಹಸೀಲ್ದಾರ್ ಅಮರೇಶ ಬಿರಾದಾರ್, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಲಕ್ಷ್ಮಣ ಜ್ಯೋತಿ, ಶರಣಗೌಡ ಹಂಚಿನಾಳ, ಬಸನಗೌಡ, ರಾಮಣ್ಣ, ಶಿವಪ್ಪ ಪಲಕನಮರಡಿ ಇತರರಿದ್ದರು.