ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಮಾಹಿತಿ ತಂತ್ರಜ್ಞಾನ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಸುರಕ್ಷಿತ ಅಂತರ್ಜಾಲ ದಿನ-2026ರ ಕಾರ್ಯಾಗಾರವನ್ನು ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ ಉದ್ಘಾಟಿಸಿದರು. ವೈರ್‌ಲೆಸ್ ಪಿಎಸ್‌ಐ ಮಹೇಶ , ಎನ್‌ಐಸಿನ ಹಿರಿಯ ನಿರ್ದೇಶಕ ಟಿ.ಕೆ.ರಾಘವೇಂದ್ರ,ಜಿಪಂ ಮುಖ್ಯ ಲೆಕ್ಕಾಧಿಕಾರಿ ಡಾ.ವಿಜಯಶಂಕರ್, ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಜಗದ್ದೀಶ್ ಇದ್ದರು. 
ರಾಯಚೂರು

ಸುರಕ್ಷಿತ ಅಂತರ್ಜಾಲ ದಿ ಕಾರ್ಯಾಗಾರ ಜವಾಬ್ದಾರಿಯುತ ಅಂತರ್ಜಾಲ ಬಳಕೆ ಅತಿಮುಖ್ಯ-ಪೂಜಾರಿ ಸಲಹೆ

ರಾಯಚೂರು

ಪ್ರಸ್ತುತ ಸನ್ನಿವೇಶದಲ್ಲಿ ಬಹುತೇಕ ಎಲ್ಲ ವಲಯಗಳಲ್ಲಿ ಅಂತರ್ಜಾಲ ಬಳಕೆಯಾಗುತ್ತಿದೆ. ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯ ಬಗ್ಗೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕೆಂದು ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಮಾಹಿತಿ ತಂತ್ರಜ್ಞಾನ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಸುರಕ್ಷಿತ ಅಂತರ್ಜಾಲ ದಿನ-2026ರ ಕಾರ್ಯಾಗಾರದಲ್ಲಿ ಸಸಿಗೆ ನೀರುಣಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸೈಬರ್ ಸುರಕ್ಷತೆಯನ್ನು ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ಅಳವಡಿಸಿಕೊಳ್ಳಬೇಕು. ಬ್ಯಾಂಕಿಂಗ್ , ಇ-ಆಫೀಸ್, ಆನ್‌ಲೈನ್ ತರಗತಿ, ಮೀಟಿಂಗ್‌ಗಳು ಹೀಗೆ ಎಲ್ಲೆಡೆ ಅಂತರ್ಜಾಲ ಬಳಕೆ ವ್ಯಾಪಕವಾಗಿದೆ. ಅದೇ ರೀತಿ ಸೈಬರ್ ಅಪರಾಧಗಳೂ ಹೆಚ್ಚುತ್ತಿವೆ ಎಂದರು.

ಅಕ್ಷರಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿ ಸೈಬರ್ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸೈಬರ್ ವಂಚನೆಯ ಮೂಲಕ ಕೋಟಿಗಟ್ಟಲೆ ಹಣವನ್ನು ಖಾತೆಗಳಿಂದ ಕಬಳಿಸಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಸುರಕ್ಷಿತ ಅಂತರ್ಜಾಲ ಬಳಕೆ ಬಗ್ಗೆ ತಿಳಿದುಕೊಳ್ಳಬೇಕು. ವಂಚನೆಗೆ ಒಳಗಾದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು ಎಂದರು.

ವೈರ್‌ಲೆಸ್ ಪಿಎಸ್‌ಐ ಮಹೇಶ ಮಾತನಾಡಿ, ಕಚೇರಿಗಳಲ್ಲಿ ಲಾಗಿನ್ ಮಾಹಿತಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಬಳಕೆ ನಂತರ ಕಡ್ಡಾಯವಾಗಿ ಲಾಗ್‌ಔಟ್ ಮಾಡಬೇಕು. ಮಕ್ಕಳು, ಹದಿಹರೆಯದವರು ಕಲಿಕೆ, ಮನರಂಜನೆಗಾಗಿ ಇಂದು ಹೆಚ್ಚಾಗಿ ಅಂತರ್ಜಾಲ ಬಳಸುತ್ತಿದ್ದಾರೆ. ವಂಚಕರು ಮೊಬೈಲ್‌ಗೆ ಕರೆ ಮಾಡಿ ನೀವು ಕಳುಹಿಸಿದ ಕೋರಿಯರ್ ಪಾರ್ಸಲ್‌ಗಳಲ್ಲಿ ಮಾದಕ ವಸ್ತು, ನಕಲಿ ಪಾಸ್‌ಪೋರ್ಟ್ ಇದೆ. ನಿಮ್ಮ ವಿರುದ್ಧ ಬೇರೆ ರಾಜ್ಯಗಳಲ್ಲಿ ದೂರು ದಾಖಲಾಗಿದೆ ಎಂದು ಬೆದರಿಸಿ ಡಿಜಿಟಲ್ ಅರೆಸ್ಟ್ ಮಾಡಿ ತಮ್ಮ ಖಾತೆಗೆ ಹಣ ಹಾಕಿಸಿಕೊಳ್ಳುವ ವಂಚಕರಿದ್ದಾರೆ ಎಂದು ಎಚ್ಚರಿಸಿದರು.

ಎನ್‌ಐಸಿನ ಹಿರಿಯ ನಿರ್ದೇಶಕ ಟಿ.ಕೆ.ರಾಘವೇಂದ್ರ ಮಾತನಾಡಿ, ಚತುರ ತಂತ್ರಜ್ಞಾನ, ಸುರಕ್ಷಿತ ಆಯ್ಕೆಗಳು, ಎಐನ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯನ್ನು ಅನ್ವೇಷಿಸುವುದು ಎಂಬುದು ಈ ವರ್ಷದ ಸುರಕ್ಷಿತ ಅಂತರ್ಜಾಲ ಬಳಕೆ ದಿನದ ಘೋಷವಾಕ್ಯ. ಅಂತರ್ಜಾಲ ವಂಚನೆ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸುರಕ್ಷಿತ ಅಂತರ್ಜಾಲ ಬಳಕೆ ಬಗ್ಗೆ ತಿಳಿವಳಿಕೆ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶ ಎಂದರು.

ಈ ಸಂದರ್ಭದಲ್ಲಿ ಜಿಪಂ ಮುಖ್ಯ ಲೆಕ್ಕಾಧಿಕಾರಿ ಡಾ.ವಿಜಯಶಂಕರ್, ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಜಗದ್ದೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.