ಜಾಲಹಳ್ಳಿಯಲ್ಲಿ ಸಿಐಟಿಯುನಿಂದ ವಿಶ್ವ ಕಾರ್ಮಿಕ ದಿನ ಆಚರಿಸಲಾಯಿತು. ಸಿಐಟಿಯು ತಾಲೂಕು ಸಂಚಾಲಕ ಗಿರಿಯಪ್ಪ ಪೂಜಾರಿ, ಪ್ರಮುಖರಾದ ಮಲ್ಲಮ್ಮ, ಮೈಹಿಬೂಬ್, ಶಂಕರ್, ಪರ್ವಿನ್, ಹನುಮಂತ ಬಿದರಾಣಿ, ಕಾಸಿಲಿಂಗ, ರಂಗಪ್ಪ, ಚನ್ನಮ್ಮ, ಮುದುರಂಗಪ್ಪ ಯರಕಮಟ್ಟಿ ಇತರರಿದ್ದರು.
- ಸಿಐಟಿಯು ತಾಲೂಕು ಸಂಚಾಲಕ ಗಿರಿಯಪ್ಪ ಪೂಜಾರಿ ಹೇಳಿಕೆ
- ದೇವದುರ್ಗ ವಿಶ್ವ ಕಾರ್ಮಿಕ ದಿನ
ದೇವದುರ್ಗ: ಖಾಸಗೀಕರಣ, ಬಂಡವಾಳಶಾಹಿ ಆಡಳಿತ, ಕಾರ್ಪೋರೇಟ್ ಕಂಪನಿಗಳ ಲಾಬಿಯಿಂದ ಕಾರ್ಮಿಕರು ತೀವ್ರ ಶೋಷಣೆ ಅನುಭವಿಸುತ್ತಿದ್ದು, ರಕ್ಷಣೆ ಮಾಡಬೇಕಿದೆ ಎಂದು ಸಿಐಟಿಯು ತಾಲೂಕು ಸಂಚಾಲಕ ಗಿರಿಯಪ್ಪ ಪೂಜಾರಿ ಹೇಳಿದರು.
ತಾಲೂಕಿನ ಜಾಲಹಳ್ಳಿಯ ಶ್ರಮಿಕ ಭವನದಲ್ಲಿ ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ, ಬಂಡವಾಳ ಶಾಹಿಗಳ ಪರವಾದ ನಿಯಮಗಳು, ಕಾರ್ಮಿಕ ಸಂಹಿತೆಗಳ ಜಾರಿಯಿಂದ ದುಡಿವ, ಶೋಷಿತ ವರ್ಗ ತೀವ್ರ ಸಮಸ್ಯೆ ಎದುರಿಸುತ್ತಿದೆ. ಎಲ್ಲ ಸರ್ಕಾರಗಳು ಬಂಡವಾಳಗಾರರ ಪರವಾಗಿ ಕೆಲಸ ಮಾಡಿ ಕಾರ್ಮಿಕರನ್ನು ಶೋಷಣೆ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಯಂ ಪದ್ಧತಿ ತೆಗೆದು ಅವೈಜ್ಞಾನಿಕ ಗುತ್ತಿಗೆ ಪದ್ಧತಿ, ದಿನಗೂಲಿ, ಹೊರಗುತ್ತಿಗೆ ನೌಕರರು ಎಂಬ ಅನಿಷ್ಟ ಪದ್ಧತಿ ಜಾರಿಗೊಳಿಸಿವೆ. ಅಲ್ಲದೆ 1948ರ ಕನಿಷ್ಠ ವೇತನ ಕಾಯ್ದೆ ರದ್ದು ಮಾಡಿ ಶಕ್ತಿ ಇಲ್ಲದ ನಾಲ್ಕು ಕಾರ್ಮಿಕರ ಕೋಡುಗಳನ್ನು ತಂದಿದೆ. ಇದರಿಂದ ದುಡಿಯುವ ಕಾರ್ಮಿಕರಿಗೆ ಇರುವ 39 ಕಾನೂನುಗಳನ್ನು ತೆಗೆದು ಹಾಕಲು ಸರ್ಕಾರ ಮುಂದಾಗಿವೆ. ಎರಡನೇ ಸ್ವಾತಂತ್ರ್ಯ ಚಳವಳಿಯಂತೆ ಕಾರ್ಮಿಕರ ಚಳವಳಿ ಮಾಡಬೇಕಾಗಿದೆ. ಅಲ್ಲದೆ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಗಟ್ಟಿಯಾದ ಹೋರಾಟ ಸಂಘಟಿಸುವುದು ಅಗತ್ಯವಾಗಿದೆ ಎಂದರು. ಪ್ರಮುಖರಾದ ಮುದ್ದಮ್ಮ, ಮಲ್ಲಮ್ಮ, ಮೈಹಿಬೂಬ್, ಶಂಕರ್, ಪರ್ವಿನ್, ಹನುಮಂತ ಬಿದರಾಣಿ, ಕಾಸಿಲಿಂಗ, ರಂಗಪ್ಪ, ಚನ್ನಮ್ಮ, ಮುದುರಂಗಪ್ಪ ಯರಕಮಟ್ಟಿ ಇತರರಿದ್ದರು.