ಲಿಂಗಸುಗೂರಿನಲ್ಲಿ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮವನ್ನು ಶಾಸಕ ಮಾನಪ್ಪ ವಜ್ಜಲ್ ನೆರವೇರಿಸಿದರು. ತಹಸೀಲ್ದಾರ್ ಸತ್ಯಮ್ಮ, ಬಿಸಿಎಂ ಇಲಾಖೆ ಜಿಲ್ಲಾಧಿಕಾರಿ ಸುನೀತಾ ಘಟ ಕಾಂಬಳೆ, ತಾಲೂಕು ಅಧಿಕಾರಿ ಮಾನಪ್ಪ ಬಡಿಗೇರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸವನಗೌಡ ಮೇಟಿ ಇತರರಿದ್ದರು. 
ರಾಯಚೂರು

ಶಿಕ್ಷಣಕ್ಕೆ ಪ್ರತಿ ವರ್ಷ 20 ಕೋಟಿ ರೂ. ಖರ್ಚು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಮಾನಪ್ಪ ವಜ್ಜಲ್ ಹೇಳಿಕೆ
  • ಲಿಂಗಸುಗೂರಿನಲ್ಲಿ ವಸತಿ ನಿಲಯ ಉದ್ಘಾಟನೆ
ಲಿಂಗಸುಗೂರು: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಶಾಲೆ, ವಸತಿ ನಿಲಯ ಕಟ್ಟಡ ಸೇರಿದಂತೆ ಶಿಕ್ಷಣಕ್ಕಾಗಿ ಪ್ರತಿವರ್ಷ 20 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ಹಿಂದುಳಿದ ವರ್ಗಗಳ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ನೂತನ ಕಟ್ಟಡ ಉದ್ಘಾಟಿಸಿ ಬುಧವಾರ ಮಾತನಾಡಿದರು. 
ಡಾ.ನಂಜುಂಡಪ್ಪ ವರದಿ ಆಧಾರದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನುದಾನ ಒದಗಿಸಲಾಗುತ್ತಿದೆ. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಶೇ.100 ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಅವಕಾಶ ಸಿಕ್ಕಂತೆ ಹಿಂದುಳಿದ ವರ್ಗದವರಿಗೂ ಪೂರ್ಣ ಅವಕಾಶ ಕಲ್ಪಿಸಲು ಪ್ರಯತ್ನಿಸುತ್ತೇನೆ. ಶಿಕ್ಷಣದಿಂದ ಯಾರೂ ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸೌಲಭ್ಯಗಳನ್ನು ಸದುಪಯೋಗ ಪಡೆದು ಉನ್ನತ ಸಾಧನೆ ಮಾಡಬೇಕು. ಶಾಲೆ, ವಸತಿ ನಿಲಯಗಳಲ್ಲಿ ಶೌಚಗೃಹ, ಸ್ನಾನಗೃಹ, ಗುಣಮಟ್ಟದ ಆಹಾರ ಪೂರೈಕೆ ಮಾಡಲು ಅಧಿಕಾರಿಗಳು ಗಮನ ಹರಿಸಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಸತ್ಯಮ್ಮ ಮಾತನಾಡಿ, ನಾನು ಸಹ ಸಿಂಧನೂರಿನ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಸರ್ಕಾರದ ಅವಕಾಶ ಪಡೆದು ಜೀವನ ಕಟ್ಟಿಕೊಂಡಿದ್ದೇನೆ. ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಮೂಲ ಸೌಕರ್ಯದಿಂದ ವಂಚಿತರಾಗಬಾರದು. ಒಳ್ಳೆಯ ವಿದ್ಯಾಭ್ಯಾಸ ಪಡೆದು ಸಾಧನೆ ಮಾಡಿ ಪಾಲಕರಿಗೆ ಕೀರ್ತಿ ತರಬೇಕು ಎಂದರು.
ಬಿಸಿಎಂ ಇಲಾಖೆ ಜಿಲ್ಲಾಧಿಕಾರಿ ಸುನೀತಾ ಘಟ ಕಾಂಬಳೆ, ತಾಲೂಕು ಅಧಿಕಾರಿ ಮಾನಪ್ಪ ಬಡಿಗೇರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸವನಗೌಡ ಮೇಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ್, ಟಿಎಪಿಸಿಎಂಎಸ್ ಅಧ್ಯಕ್ಷ ಶಶಿಧರ ಪಾಟೀಲ್ ಆಶಿಹಾಳ, ಬಿಜೆಪಿ ಮುಖಂಡರಾದ ಗಿರಿಮಲ್ಲನಗೌಡ ಪಾಟೀಲ್, ಕೆ.ನಾಗಭೂಷಣ, ಮುದುಕಪ್ಪ ನಾಯಕ, ಪರಶುರಾಮ ಕೆಂಭಾವಿ ಇದ್ದರು.