ರಾಜ್ಯದ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟು ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ ಎಸ್‌ಎಪಿ ಅಡಿಯಲ್ಲಿ 100 ಕೋಟಿ ಹಾಗೂ ಟಿಎಸ್‌ಪಿ ಅಡಿಯಲ್ಲಿ 48 ಕೋಟಿ ಅನುದಾನವನ್ನು ಸರ್ಕಾರ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ನೀಡಿದೆ ಎಂದು ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಲೆಮಾರಿ ಸಮುದಾಯಗಳ ಮೂಲ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವ ನಿಟ್ಟಿನಲ್ಲಿ ನಿಗಮದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಲೆಮಾರಿ, ಅರೆ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟು ಸಮುದಾಯದ ಬಹುತೇಕ ಕುಟುಂಬಗಳಿಗೆ ಮೂಲ ದಾಖಲಾತಿಗಳ ಕೊರತೆ, ಶಾಶ್ವತ ನೆಲೆ ಇಲ್ಲದಿರುವುದು, ಶಿಕ್ಷಣದಿಂದ ವಂಚಿತರಾಗಿರುವುದು ಹಾಗೂ ಸರ್ಕಾರದ ಸೌಲಭ್ಯಗಳ ಕುರಿತು ಅರಿವಿನ ಕೊರತೆ ಪ್ರಮುಖ ಸಮಸ್ಯೆ ಗಳಾಗಿವೆ. ಮೊದಲು ಅವರಿಗೆ ಶಾಶ್ವತ ನೆಲೆ ಕಲ್ಪಿಸಿ, ಅಗತ್ಯ ಮೂಲ ದಾಖಲಾತಿಗಳನ್ನು ಒದಗಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ರಾಜ್ಯದ 31 ಜಿಲ್ಲೆಗಳಲ್ಲಿ ತಾಲೂಕುವಾರು ಪ್ರವಾಸ ಕೈಗೊಂಡು ನಿಗಮದ ಯೋಜನೆಗಳ ಅನುಷ್ಠಾನ ಹಾಗೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಅಲೆಮಾರಿಗಳು ಡೇರೆ, ಜೋಪಡಿ ಹಾಗೂ ಗುಡಿಸಲುಗಳಲ್ಲಿ ವಾಸಿಸುವ ಸ್ಥಳಗಳಿಗೆ ತೆರಳಿ ಅಲ್ಲಿಯೇ ಆಧಾರ್ ಕಾರ್ಡ್ ಒದಗಿಸುವಂತೆ ಸರ್ಕಾರದಿಂದ ಆದೇಶ ಮಾಡಿಸಲಾಗಿ ದೆ. ಆಧಾರ್ ನಂತರ ರೇಷನ್ ಕಾರ್ಡ್, ಜಾತಿ ಪ್ರಮಾಣಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದರು.
ಬಹುತೇಕ ಜಿಲ್ಲೆಗಳಲ್ಲಿ ಅಲೆಮಾರಿ ಸಮುದಾಯದವರಿಗೆ ನಿವೇಶನ ಹಾಗೂ ಭೂಮಿ ಕಲ್ಪಿಸುವ ಕಾರ್ಯ ನಡೆದಿದೆ. ಕೊಪ್ಪಳ ಜಿಲ್ಲೆಯಲ್ಲಿ 24 ಎಕರೆ ಭೂಮಿಯನ್ನು ನಿವೇಶನಕ್ಕಾಗಿ ನಿಗದಿಪಡಿಸಲಾಗಿದೆ. ಅಲೆಮಾರಿ ಸಮುದಾಯದವರು ವಾಸಿಸುವ ಕಾಲೋನಿಗಳಿಗೆ ಮೂಲಸೌಕರ್ಯ ಕಲ್ಪಿಸುವ ಕೆಲಸವನ್ನೂ ನಿಗಮದಿಂದ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಅಲೆಮಾರಿ ಸಮುದಾಯದವರಿಗೆ ಜಾತಿ ಪ್ರಮಾಣಪತ್ರ ಪಡೆಯುವಲ್ಲಿ ಹಲವು ಜಿಲ್ಲೆಗಳಲ್ಲಿ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಪೂರ್ವಜರ ಜಾತಿ ಪ್ರಮಾಣಪತ್ರ ಅಥವಾ ಶೈಕ್ಷಣಿಕ ದಾಖಲೆಗಳನ್ನು ಕೇಳುವುದರಿಂದ ಶಿಕ್ಷಣವಂಚಿತವಾಗಿದ್ದ ಅಲೆಮಾರಿ ಸಮುದಾಯದವರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸ್ಥಳ ಪರಿಶೀಲನೆ, ಸಮುದಾಯದ ಆಚರಣೆ, ಮದುವೆ ಪದ್ಧತಿ, ಜೀವನಶೈಲಿ, ಆಹಾರ ಪದ್ಧತಿ, ವೃತ್ತಿ ಹಾಗೂ ಭಾಷೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಜಾತಿ ಪ್ರಮಾಣಪತ್ರ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೃಷ್ಣ ಶಾವಂತಗೇರಾ, ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಶಿಮಾನಪ್ಪ ಇದ್ದರು.