ರಾಯಚೂರಿನ ಕೆಕೆಆರ್‌ಟಿಸಿ 3ನೇ ಘಟಕದಲ್ಲಿ ಬುಧವಾರ ಸಂಜೆ ಜಿಲ್ಲಾ ಸಾರಿಗೆ ಇಲಾಖೆ ಹಾಗೂ ಕೆಕೆಆರ್‌ಟಿಸಿ ವತಿಯಿಂದ ರಸ್ತೆ ಸುರಕ್ಷತೆಯ ಜಾಗೃತಿ ಕಾರ್ಯಕ್ರಮದಲ್ಲಿ ಮೋಟಾರ್ ವಾಹನ ನಿರೀಕ್ಷಕ ರಾಕೇಶ ಎಂ. ಮಾತನಾಡಿದರು. ಕೆಕೆಆರ್‌ಟಿಸಿ ಡಿಸಿ ಇಮಾಮ್ ಖಾಸಿಂ ಕಂದಗಲ್, ನೇತಾಜಿ ಠಾಣೆಯ ಪಿಎಸ್‌ಐ ಬಸವರಾಜ ನಾಯಕ್, ಕೆಕೆಆರ್‌ಟಿಸಿಯ ಡಿಟಿಓ ಚಂದ್ರಶೇಖರ,ಬಿಎಂಇ ನಾಗರಾಜ ವಾರದ್, ಡಿಪೋ ಮ್ಯಾನೇಜರ್ ನಾನೇಗೌಡ, ವಕೀಲ ವೀರಗುಂಡಯ್ಯ ಸ್ವಾಮಿ ಇದ್ದರು. 
ರಾಯಚೂರು

ಆರ್‌ಟಿಓ ಇಲಾಖೆಯಿಂದ ರಸ್ತೆ ಸುರಕ್ಷತಾ ಜಾಗೃತಿ ಸಭೆ

ರಾಯಚೂರು

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರಿಗೆ ಸುರಕ್ಷಿತ ಪ್ರಯಾಣ ಕಲ್ಪಿಸುವ ಉದ್ದೇಶದಿಂದ ಜಿಲ್ಲಾ ಸಾರಿಗೆ ಇಲಾಖೆ ಹಾಗೂ ಕೆಕೆಆರ್‌ಟಿಸಿ ವತಿಯಿಂದ ನಗರದ ಕೆಕೆಆರ್‌ಟಿಸಿ 3ನೇ ಘಟಕದಲ್ಲಿ ಬುಧವಾರ ಸಂಜೆ ರಸ್ತೆ ಸುರಕ್ಷತೆಯ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಮೋಟಾರ್ ವಾಹನ ನಿರೀಕ್ಷಕ ರಾಕೇಶ ಎಂ. ಮಾತನಾಡಿ, ಕಳೆದ ಒಂದು ವರ್ಷದಲ್ಲಿ 40 ಕ್ಕೂ ಅಧಿಕ ಸಾರಿಗೆ ಇಲಾಖೆಯ ಬಸ್‌ಗಳಿಂದ ಅಪಘಾತಗಳಾಗಿವೆ. ಬಸ್ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸುವುದರ ಜತೆಗೆ ಎಚ್ಚರಿಕೆಯಿಂದ ಚಾಲನೆ ಮಾಡಬೇಕು ಎಂದರು. ಚಾಲನೆ ಮಾಡುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು, ರಸ್ತೆ ನಿಯಮಗಳ ಕಟ್ಟುನಿಟ್ಟಿನ ಪಾಲನೆ, ವಾಹನಗಳ ತಾಂತ್ರಿಕ ದೋಷಗಳ ನಿವಾರಣೆ ಮತ್ತು ಪ್ರಯಾಣಿಕರ ಸುರಕ್ಷತೆಯ ಪ್ರಾಮುಖ್ಯತೆಯ ಕುರಿತು ವಿವರಿಸಿದರು.

ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಇಮಾಮ್ ಖಾಸಿಂ ಕಂದಗಲ್ ಮಾತನಾಡಿ, ನಿಗಮದ ವತಿಯಿಂದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸಿಬ್ಬಂದಿ ವರ್ಗವು ಕರ್ತವ್ಯದ ವೇಳೆ ಯಾವುದೇ ನಿರ್ಲಕ್ಷ್ಯ ತೋರದೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ನಂತರ ಚಾಲಕರು ಹಾಗೂ ತಾಂತ್ರಿಕ ಸಿಬ್ಬಂದಿ ತಾವು ಎದುರಿಸುವ ತಾಂತ್ರಿಕ ಮತ್ತು ವೃತ್ತಿಪರ ಸವಾಲುಗಳ ಕುರಿತು ಅಧಿಕಾರಿಗಳೊಂದಿಗೆ ಮುಕ್ತವಾಗಿ ಚರ್ಚಿಸಿದರು.