ಸಿರವಾರ-ರಾಯಚೂರು ಮುಖ್ಯರಸ್ತೆ ಅಗೆದು ಬಿಟ್ಟಿರುವುದರಿಂದ ಮಣ್ಣು ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಿರುವುದು. 
ರಾಯಚೂರು

ಆಮೆಗತಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ

ನರೇಶ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • ಸಿರವಾರದಲ್ಲಿ ಜಲ್ಲಿಕಲ್ಲು ಹಾಕಿ ಬಿಟ್ಟ ಗುತ್ತಿಗೆದಾರರು
  • ವಾಹನ ಸವಾರರು, ಪಾದಚಾರಿಗಳಿಗೆ ಸಮಸ್ಯೆ
ಸಿರವಾರ: ಪಟ್ಟಣದ ಎಪಿಎಂಸಿ ಕ್ರಾಸ್‌ನಿಂದ ರಾಯಚೂರು ರಸ್ತೆಯ ಭಾಗ್ಯನಗರ ಕ್ಯಾಂಪ್ ಕ್ರಾಸ್‌ವರೆಗಿನ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ಅಮೆಗತಿಯಲ್ಲಿ ಸಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ.
ಕೆಕೆಆರ್‌ಡಿಬಿ ಯೋಜನೆಯಡಿ ಅಂದಾಜು 5 ಕೋಟಿ ರೂ. ಅನುದಾನದಲ್ಲಿ ಡಾಂಬರೀಕರಣ ರಸ್ತೆ, ಎರಡು ಬದಿ ಚರಂಡಿ, ಡಿವೈಡರ್, ಸಿಟಿ ಲೈಟ್ ನಿರ್ಮಾಣದ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದೆ. ಕಳೆದ ಎರಡು ತಿಂಗಳಿಂದ ಕಾಮಗಾರಿ ಕುಂಟುತ್ತ ಸಾಗಿರುವುದರಿಂದ ವಾಹನ ಸವಾರರು, ಪಾದಚಾರಿಗಳ ಜತೆಗೆ ರಸ್ತೆ ಅಗೆದು ಬಿಟ್ಟಿರುವುದರಿಂದ ಮುಖ್ಯರಸ್ತೆಯ ಅಂಗಡಿಗಳ ವ್ಯಾಪಾರಸ್ಥರು ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ. ಅಂಗಡಿ ಮುಂದೆಯೇ ಅಗೆದಿರುವುದರಿಂದ ಗ್ರಾಹಕರು ಹೋಗಿ ಬರಲು ದಾರಿ, ವಾಹನಗಳನ್ನು ನಿಲ್ಲಿಸಲು ಸೂಕ್ತ ಸ್ಥಳವಿಲ್ಲವಾಗಿದೆ. 
ಸದ್ಯ ಮಳೆಗಾಲ ಆರಂಭವಾಗಿದ್ದು, ಸ್ವಲ್ಪ ಮಳೆ ಬಂದರೆ ಸಾಕು ಈಗಾಗಲೇ ಅಗೆದಿರುವ ರಸ್ತೆ ಕೆಸರು ಗದ್ದೆಯಂತಾಗುತ್ತದೆ. ವಾಹನ ಸವಾರರು ಜೀವ ಭಯದಲ್ಲಿ ಓಡಾಡುವಂತಾಗಿದೆ. ಅಂಗಡಿ ಮಾಲೀಕರ ಗೋಳು ಕೇಳುವವರು ಇಲ್ಲದಂತಾಗಿದೆ. ಈಗಾಗಲೇ ಎಪಿಎಂಸಿ ಹಾಗೂ ಎಸ್‌ಬಿಐ ಬ್ಯಾಂಕ್ ಮುಂದೆ ಅಗೆದ ರಸ್ತೆಯಲ್ಲಿ ಜಲ್ಲಿಕಲ್ಲುಗಳನ್ನು ಹಾಕಿ ನಿಧಾನಗತಿಯಲ್ಲಿ ಕೆಲಸ ಮಾಡಲಾಗುತ್ತಿದೆ. 
ಕಾಮಗಾರಿ ಒಂದು ಕಡೆಯಿಂದ ಪೂರ್ಣವಾಗಿ ಮಾಡುವಂತೆ ಅಂಗಡಿಗಳ ಮಾಲೀಕರ ಒತ್ತಾಯವಾಗಿದೆ. ಮಧ್ಯದಲ್ಲಿ ಅಂಗಡಿಗಳ ಮಾಲೀಕರು ಮಣ್ಣು ಹಾಕಿಕೊಂಡು ಅಂಗಡಿಗಳಿಗೆ ಹೋಗುವುದಕ್ಕೆ ದಾರಿ ಮಾಡಿಕೊಂಡಿದ್ದಾರೆ. ಒಂದು ಕಡೆಯಿಂದ ಕಾಮಗಾರಿ ಮಾಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಅರೆಬರೆ ಕೆಲಸದಿಂದ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 
"

ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾದಾಗ ಕುಡಿವ ನೀರಿನ ಪೈಪ್‌ಲೈನ್ ಕೆಲಸ ಕೈಗೊಂಡಿದ್ದರಿಂದ ತಡವಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ.

— ಶಿವಪುತ್ರಪ್ಪ ಇಇ, ಲೋಕೋಪಯೋಗಿ ಇಲಾಖೆ
"

ರಸ್ತೆ ಅಗೆದು ತಿಂಗಳಾಗಿದೆ. ಬೇಗ ಕೆಲಸ ಮಾಡುತ್ತಿಲ್ಲ. ಇದರಿಂದ ಅಂಗಡಿ ಮಾಲೀಕರು ಮತ್ತು ಗಾಡಿಗಳು ಓಡಾಡುವುದಕ್ಕೆ ತೊಂದರೆಯಾಗುತ್ತಿದೆ. ಸಿರವಾರ ಪಟ್ಟಣದ ಸಮಸ್ಯೆಗಳ ಬಗ್ಗೆ ಯಾರು ಹೇಳುವವರು, ಕೇಳುವವರು ಇಲ್ಲದಂತಾಗಿದೆ.

— ಅಮರೇಶ ಸ್ಥಳೀಯ ನಿವಾಸಿ, ಸಿರವಾರ