ಮಾನ್ವಿ ತಹಸೀಲ್ದಾರ್ ಭೀಮರಾಯ ರಾಮಸಮುದ್ರಗೆ ಸಿಪಿಐ ಎಂಎಲ್ ಪ್ರಮುಖರು ಮನವಿ ಸಲ್ಲಿಸಿದರು.
ಮಾನ್ವಿ: ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಅವೈಜ್ಞಾನಿಕವಾಗಿ ಮಾಡುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾಮಗಾರಿ ಕೈಗೊಳ್ಳಬೇಕೆಂದು ಸಿಪಿಐ ಎಂಎಲ್ ತಾಲೂಕು ಕಾರ್ಯದರ್ಶಿ ಯಲ್ಲಪ್ಪ ಉಟಕನೂರು ಆಗ್ರಹಿಸಿದರು.
ತಹಸೀಲ್ದಾರ್ ಭೀಮರಾಯ ರಾಮಸಮುದ್ರಗೆ ಮನವಿ ಸಲ್ಲಿಸಿ ಸೋಮವಾರ ಮಾತನಾಡಿದರು. ಪೋತ್ನಾಳದಲ್ಲಿ ಕೆಆರ್‌ಡಿಸಿಎಲ್ ವತಿಯಿಂದ ನಿರ್ಮಾಣ ಮಾಡುತ್ತಿರುವ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ. ವಿದ್ಯುತ್ ಕಂಬಗಳು, ಕುಡಿಯುವ ನೀರಿನ ಪೈಪ್‌ಲೈನ್ ಸೇರಿದಂತೆ ಸಾರ್ವಜನಿಕ ಮೂಲಸೌಕರ್ಯಗಳಿಗೆ ಹಾನಿಯಾಗದಂತೆ ಅಗತ್ಯವಿದಲ್ಲಿ ರಸ್ತೆ ವಿನ್ಯಾಸ ಪರಿಷ್ಕರಿಸಬೇಕು. ಹೊಸ ಬಸ್ ನಿಲ್ದಾಣ ಹಾಗೂ ಸುಸಜ್ಜಿತ ಸಾರ್ವಜನಿಕ ಶೌಚಗೃಹ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ರಸ್ತೆಯಲ್ಲಿ ಮಳೆ ನೀರು ಹರಿಯುವುದಕ್ಕೆ ಚರಂಡಿ, ಪಾದಚಾರಿ ಮಾರ್ಗ, ಜೀಬ್ರಾ ಕ್ರಾಸಿಂಗ್, ರಸ್ತೆ ಸೂಚನಾ ಫಲಕಗಳು ಹಾಗೂ ವೇಗ ನಿಯಂತ್ರಕಗಳನ್ನು ಅಳವಡಿಸಬೇಕು. ಸಾರ್ವಜನಿಕರ ಸುರಕ್ಷತೆಗಾಗಿ ಬ್ಯಾರಿಕೇಡ್, ರಾತ್ರಿ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಕಾಮಗಾರಿ ವೇಳೆ ಗುತ್ತಿಗೆದಾರರು ಗ್ರಾಪಂ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಭೆ ನಡೆಸಬೇಕು. ಈ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆ.7 ರಂದು ಪೋತ್ನಾಳ್ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.