ರಾಯಚೂರು
ರೈತರ ಸಾಲ ಸಂಪೂರ್ಣ ಮನ್ನಾಮಾಡಿ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಜು.24 ರಂದು ದೇವದುರ್ಗ ತಾಲೂಕಿನ ಮದರಕಲ್ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುತ್ತದೆಂದು ಸಂಘದ ರಾಜ್ಯಾಧ್ಯಕ್ಷ ಮಸ್ತಾನ್ ನಾಯಕ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ಬರ ಎದುರಾಗಿದೆ. ರೈತರು ಬೆಳೆ ಸಾಲ ಮರಳಿಸಲು ಸಾಧ್ಯವಾಗದ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆದರೆ ರಾಜ್ಯ ಸರ್ಕಾರ ಬರಗಾಲ ಘೋಷಿಸಲು ಮೀನಮೇಷ ಮಾಡುತ್ತಿದೆ. ಮುಂಗಾರು ಸಂಪೂರ್ಣ ಕೈ ಕೊಟ್ಟಿದೆ. ಕೂಡಲೇ ಬರಪರಿಹಾರ ಕಾಮಗಾರಿ ಪ್ರಾರಂಭಿಸಬೇಕು.
ಜನ, ಜಾನುವಾರುಗಳಿಗೆ ಕುಡಿಯುವ ನೀರು ವ್ಯವಸ್ಥೆ ಮಾಡಿ ಅಲಮಟ್ಟಿ ಜಲಾಶಯ, ನಾರಾಯಣಪುರು ಜಲಾಶಯಗಳಲ್ಲಿರುವ ನೀರನ್ನು ಕಾಲುವೆ ಹರಿಸುವಮೂಲಕ ರೈತರ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಎಲ್ಲಾ ಕೆರೆಗಳನ್ನು ಭರ್ತಿ ಮಾಡುವದು, ನಿರಂತರ 12 ತಾಸು ವಿದ್ಯುತ್ ಪೂರೈಸುವದು, ವಿವಿಧ ಠಾಣೆಗಳಲ್ಲಿ ರೈತರ ಹೋರಾಟಗಾರರ ಮೇಲೆ ಹಾಕಿರುವ ಕೇಸ್‌ಗಳನ್ನು ಹಿಂಪಡೆಯುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ರಸ್ತೆ ತಡೆ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಂಗನಾಥ, ಸಂಗಮೇಶ ನಾಯಕ, ಆಂಜಿನೇಯ್ಯ ಶಾಸ್ತ್ರಿ, ಸತ್ಯರೆಡ್ಡಿ, ವಿರೇಶ ನಾಯಕ ಇದ್ದರು.