ಕವಿತಾಳದ ಲಾಳೆಮಸಕ್ ದರ್ಗಾಕ್ಕೆ ಡಾಂಬರೀಕರಣ ಕಾಮಗಾರಿಗೆ ಸಂಬಂಧಿಸಿ ಅಧಿಕಾರಿ ರಾಘವೇಂದ್ರ ಅವರನ್ನು ಮಾಜಿ ಸಚಿವ ಎನ್.ಎಸ್. ಬೋಸರಾಜು, ಶಾಸಕ ಹಂಪಯ್ಯನಾಯಕ ತರಾಟೆಗೆ ತೆಗೆದುಕೊಂಡರು.
ಕವಿತಾಳ: ಪಟ್ಟಣದಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ ಕೈಗೊಂಡಿರುವ ಸಿಸಿ ರಸ್ತೆ ಸೇರಿ ವಿವಿಧ ಕಾಮಗಾರಿಗಳಿಗೆ ಎಂಎಲ್ಸಿ, ಮಾಜಿ ಸಚಿವ ಎನ್.ಎಸ್. ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ ಚಾಲನೆ ನೀಡಿದರು. ಇದೇ ವೇಳೆ ರಸ್ತೆ ಡಾಂಬರೀಕರಣ ನೀಲಿನಕ್ಷೆ ಅವೈಜ್ಞಾನಿಕವಾಗಿದೆ ಎಂದು ಕಾಮಗಾರಿ ಮಾಡದಂತೆ ಸೂಚಿಸಲಾಯಿತು.
ವೆಂಕಟೇಶ ಗಚ್ಚಿನಮನೆಯಿಂದ ಈರಣ್ಣ ಯಾದವ ಮನೆವರೆಗೆ 200 ಮೀಟರ್, ಶಿವಪ್ಪನ ಮಠದಿಂದ ಆನ್ವರಿ ರಸ್ತೆಯ ಅಗಸಿವರೆಗೆ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಬಳಿಕ ಆನ್ವರಿ ಮುಖ್ಯರಸ್ತೆಯಿಂದ ಪಕ್ಕದ ಗುಡ್ಡದ ಮೇಲಿರುವ ಲಾಳೇಮಸಕ್ ದರ್ಗಾದವರೆಗೆ 50 ಲಕ್ಷ ರೂ. ವೆಚ್ಚದಲ್ಲಿ ಡಾಂಬರಿಕರಣ ಕಾಮಗಾರಿಗೆ ಚಾಲನೆ ನೀಡುವಾಗ ಬೋಸರಾಜು, ಹಂಪಯ್ಯನಾಯಕ ಸ್ಥಳ ಪರಿಶೀಲಿಸಿದರು.
ಈ ವೇಳೆ ಮುಖ್ಯರಸ್ತೆಯಿಂದ ಪಕ್ಕದ ಗುಡ್ಡದ ಮೇಲಿರುವ ದರ್ಗಾಕ್ಕೆ ಮೆಟ್ಟಿಲುಗಳು ಇದ್ದು, ಮೆಟ್ಟಿಲು ಮತ್ತು ರಸ್ತೆಗೆ ಬರೀ ಐದು ಮೀಟರ್ ಅಂತರವಿದೆ. ಈ ಸ್ಥಳವು ಡಾಂಬರ್ ಕಾಮಗಾರಿಗೆ ಸೂಕ್ತವಾಗಿಲ್ಲ. ಇದಕ್ಕೆ 50 ಲಕ್ಷ ರೂ. ವೆಚ್ಚದ ಡಾಂಬರ್ ರಸ್ತೆ ಹೇಗೆ ಮಾಡ್ತೀರಿ ಎಂದು ಜೆಇ ರಾಘವೇಂದ್ರ ಭೋವಿಯನ್ನು ಪ್ರಶ್ನಿಸಿದರು. ಅದಕ್ಕೆ ಅವರು ಇಲ್ಲೇ ಮಾಡಬೇಕೆಂದರು. ಇದರಿಂದ ಕೋಪಗೊಂಡ ಎಂಎಲ್ಸಿ ಹಾಗೂ ಶಾಸಕರು ಇಲ್ಲಿ ಕಾಮಗಾರಿ ಮಾಡಲು ಅವಕಾಶ ಇಲ್ಲ. ತಪ್ಪು ಮಾಹಿತಿ ಮತ್ತು ಅವೈಜ್ಞಾನಿಕವಾಗಿ ನೀಲಿನಕ್ಷೆ ಮಾಡುವುದು ಸಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಕಾಮಗಾರಿಯನ್ನು ನಿಲ್ಲಿಸಲಾಯಿತು.
ಇದೇ ಹಣವನ್ನು ಪಟ್ಟಣ ಬೇರೆ ಕಾಮಗಾರಿಗೆ ಬಳಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಮಾಜಿ ಸಚಿವರು ತಿಳಿಸಿದರು.
ಸಿರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚುಕ್ಕಿ ಶಿವಕುಮಾರ, ಜಿಪಂ ಮಾಜಿ ಸದಸ್ಯರಾದ ಕಿರಿಲಿಂಗಪ್ಪ, ಮಾಳಪ್ಪ ತೋಳ, ಪಪಂ ಸದಸ್ಯರಾದ ಮಲ್ಲಿಕಾರ್ಜುನಗೌಡ, ನಿಂಗರಾಜ ಕಂದಗಲ್, ಮಾಜಿ ಸದಸ್ಯ ಗಂಗಪ್ಪ ದಿನ್ನಿ, ತಿಮ್ಮಯ್ಯ ನಾಯಕ ಗುಡದೂರು, ತಿಪ್ಪಯ್ಯಸ್ವಾಮಿ, ಚಾಂದ್‌ಪಾಷಾ, ಸಿದ್ದಪ್ಪ ದಡ್ಯಾಳ, ನರಸಪ್ಪ ಯಕ್ಕಲ, ಕರಿಯಪ್ಪ ಮಡಿವಾಳ ಇದ್ದರು.