ಸಿರವಾರ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿವ ನೀರಿನ ಘಟಕ ಬಂದ್ ಆಗಿರುವುದು. 
ರಾಯಚೂರು

ಬಸ್ ನಿಲ್ದಾಣದಲ್ಲಿ ಆರ್‌ಒ ಪ್ಲಾಂಟ್ ಸ್ಥಗಿತ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಸೌಲಭ್ಯ ಕಲ್ಪಿಸಲು ಪ್ರಯಾಣಿಕರ ಆಗ್ರಹ
  • ಸಿರವಾರ ಬಸ್ ನಿಲ್ದಾಣದಲ್ಲಿ ನೀರಿಲ್ಲ
ಸಿರವಾರ: ಪಟ್ಟಣದ ಬಸ್ ನಿಲ್ದಾಣದಲ್ಲಿ ಕುಡಿಯಲು ನೀರಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.
ಸಿರವಾರ ತಾಲೂಕು ಕೇಂದ್ರ ಮತ್ತು ಅಂತಾರಾಜ್ಯದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವುದರಿಂದ ನಿತ್ಯ ನೂರಾರು ಬಸ್‌ಗಳು ಸಂಚರಿಸುತ್ತವೆ. ಅಲ್ಲದೆ, ವಿವಿಧ ಕೆಲಸಗಳಿಗಾಗಿ ಗ್ರಾಮೀಣ ಜನರು ನಿತ್ಯ ಬಂದು ಹೋಗುತ್ತಾರೆ. ಆದರೆ, ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿವ ನೀರಿನ ಘಟಕ ಬಂದ್ ಆಗಿರುವುದರಿಂದ ಅಂಗಡಿಗಳಲ್ಲಿ ಬಾಟಲ್ ನೀರು ಖರೀದಿಸಿ ಕುಡಿಯಬೇಕಿದೆ.
ಸದ್ಯ ಬಿಸಿಲಿನ ತೀವ್ರತೆಗೆ ಬಾಯಾರಿಕೆ ಜಾಸ್ತಿ. ಬಸ್ ನಿಲ್ದಾಣದಲ್ಲಿ ನೀರಿನ ವ್ಯವಸ್ಥೆ ಇದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಇದು ನೂತನ ಬಸ್ ನಿಲ್ದಾಣವಾಗಿರುವುದರಿಂದ ಆರ್‌ಒ ಪ್ಲಾಂಟ್ ಅಳವಡಿಸಿ ವರ್ಷವೂ ಆಗಿಲ್ಲ, ಆಗಲೇ ಕೆಟ್ಟಿದೆ. ಇನ್ನೂ ಬಸ್ ನಿಲ್ದಾಣದ ಅವರಣದಲ್ಲಿ ಯಾವುದೇ ಹೋಟೆಲ್ ಇಲ್ಲದ ಕಾರಣ ಅಂಗಡಿಗಳಲ್ಲಿ ಹಣ ನೀಡಿ ಬಾಟಲ್ ನೀರು ಪಡೆಯುವ ಅನಿವಾರ್ಯತೆ ಇದೆ. ಕೂಡಲೇ ಶುದ್ಧ ನೀರಿನ ಘಟಕ ರಿಪೇರಿ ಮಾಡಿಸಿ ಅನುಕೂಲ ಕಲ್ಪಿಸಬೇಕೆಂಬುದು ಪ್ರಯಾಣಿಕರ ಆಗ್ರಹವಾಗಿದೆ.
"

ಶುದ್ಧ ಕುಡಿವ ನೀರಿನ ಘಟಕ ಇನ್ನೂ ವಾರಂಟಿಯಲ್ಲಿದೆ. ನಮ್ಮ ಡಿಪೋ ಮ್ಯಾನೇಜರ್‌ಗೆ ತಿಳಿಸಲಾಗಿದೆ. ರಿಪೇರಿ ಮಾಡಿಸಲು ಕಂಪನಿಯವರಿಗೆ ಹೇಳಿದ್ದಾರೆ. ಶೀಘ್ರವೇ ದುರಸ್ತಿ ಮಾಡಿಸಲಾಗುವುದು.

— > ಬಸವರಾಜ, ಕಂಟ್ರೋಲರ್, ಸಿರವಾರ ಬಸ್ ನಿಲ್ದಾಣ
"

ಬಿಸಿಲಿನ ಪ್ರಖರತೆ ಹೆಚ್ಚಿದೆ. ಬಸ್ ನಿಲ್ದಾಣದಲ್ಲಿ ಯಾವುದೇ ಅಂಗಡಿ-ಹೋಟೆಲ್‌ಗಳಿಲ್ಲ. ಹೊರಗಡೆ ಹೋಗಿ ಬೇಕರಿ-ಅಂಗಡಿಗಳಲ್ಲಿ ಬಾಟಲ್ ನೀರು ಖರೀದಿಸಿ ಕುಡಿಯಬೇಕಿದೆ. ಬಸ್ ನಿಲ್ದಾಣದಲ್ಲಿ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗಲಿದೆ. — > ರಮೇಶ, ಪ್ರಯಾಣಿಕ, ರಾಯಚೂರು