- ಅಧಿವೇಶನದಲ್ಲಿ ಸಚಿವ ಮಹದೇವಪ್ಪ ಭರವಸೆ
ಸಿಂಧನೂರು: ಪ್ರಸ್ತಾವನೆ ಸ್ವೀಕೃತವಾದಲ್ಲಿ ತಾಲೂಕಿಗೆ ಹೊಸದಾಗಿ ಸ್ನಾತಕೋತ್ತರ ವಿದ್ಯಾರ್ಥಿ ನಿಲಯ ಮಂಜೂರಾತಿಗೆ ಪರಿಶೀಲನೆ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಭರವಸೆ ನೀಡಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬೆಳಗಾವಿ ಸುವರ್ಣ ಸೌಧ ಡಿ.12 ರಂದು ಸಿಂಧನೂರು ತಾಲೂಕಿಗೆ ಹೊಸದಾಗಿ ವಿದ್ಯಾರ್ಥಿನಿಲಯಗಳನ್ನು ಮಂಜೂರು ಮಾಡುವ ಸಂಬಂಧ ಜಿಲ್ಲೆಯಿಂದ ನಿಗದಿತ ನಮೂನೆಗಳಲ್ಲಿ ಜಿಲ್ಲೆಯ ಸಕ್ಷಮ ಪ್ರಾಧಿಕಾರದ ಜಿಪಂ ಸಿಇಒ ಮುಖಾಂತರ ಪ್ರಸ್ತಾವನೆಗಳು ಸ್ವೀಕೃತವಾದಲ್ಲಿ, ನಿಯಮಾನುಸಾರ ಅನುದಾನದ ಲಭ್ಯತೆ ಆಧರಿಸಿ ಆದ್ಯತೆ ಮೇಲೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಸಿಂಧನೂರು ತಾಲೂಕಿನಲ್ಲಿ 5 ಸ್ನಾತಕೋತ್ತರ ಪದವಿ ಕಾಲೇಜುಗಳಿರುತ್ತವೆ. ಇಲ್ಲಿ 200ಕ್ಕೂ ಹೆಚ್ಚು ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಿಂಧನೂರು ತಾಲೂಕಿನಲ್ಲಿ 5 ಮೆಟ್ರಿಕ್ ನಂತರದ ಬಾಲಕರ ಹಾಗೂ ಬಾಲಕಿಯರ ಹಾಸ್ಟೆಲ್‌ಗಳನ್ನು ನಡೆಸಲಾಗುತ್ತಿದೆ.
ಎರಡು ವಿದ್ಯಾರ್ಥಿ ನಿಲಯಗಳು ಸ್ವಂತ ಕಟ್ಟಡಗಳಲ್ಲಿ ಮತ್ತು 3 ವಿದ್ಯಾರ್ಥಿ ನಿಲಯಗಳು ಬಾಡಿಗೆ ಕಟ್ಟಡಗಳಲ್ಲಿದ್ದು, ಸ್ವಂತ ಕಟ್ಟಡದ ಮೂರು ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಿ ವಿದ್ಯಾರ್ಥಿ ನಿಲಯವಾಗಿ ಬಳಸಿಕೊಳ್ಳಲಾಗುವುದು. ಈ ಐದು ವಿದ್ಯಾರ್ಥಿ ನಿಲಯಗಳಲ್ಲಿ 2025-26ನೇ ಸಾಲಿಗೆ 1573 ಸಂಖ್ಯೆ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.