ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿ ಶುಕ್ರವಾರ ರೇಣುಕಾ ಯಲ್ಲಮ್ಮದೇವಿ ರಥೋತ್ಸವ ಅದ್ದೂರಿಯಾಗಿ ಜರುಗಿತು.
- ನೀರಮಾನ್ವಿ ಗ್ರಾಮದಲ್ಲಿ ಭಕ್ತರಿಂದ ಮೊಳಗಿದ ಜಯಘೋಷ
ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿ ಶುಕ್ರವಾರ ರೇಣುಕಾ ಯಲ್ಲಮ್ಮದೇವಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ದೇವಿ ಮನೆಯಿಂದ ಸಕಲ ವಾದ್ಯಗಳೊಂದಿಗೆ ರಥದ ಕಲಶ ತರುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ನಂತರ ರಥಕ್ಕೆ ಕಲಶಾರೋಹಣ ಮಾಡಲಾಯಿತು. ಸಂಜೆ ಸಚಿವ ಎನ್.ಎಸ್. ಬೋಸರಾಜು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ರಥ ಸಾಗುತ್ತಿದ್ದಂತೆ ಭಕ್ತರು ಜೈಕಾರ ಹಾಕಿದರು. ಅಲ್ಲದೆ ಹಲವರು ಹರಕೆ ಸಲ್ಲಿಸಿದರು.
ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಸ್ಥಾನ ಸಮಿತಿಯಿಂದ ಚಿಕಿತ್ಸೆಗಾಗಿ ತಾತ್ಕಾಲಿಕ ಆರೋಗ್ಯ ಶಿಬಿರ, ದೇವದಾಸಿ ಪದ್ಧತಿ ಕುರಿತು ಜನಜಾಗೃತಿ ಮೂಡಿಸಲು ಬೀದಿ ನಾಟಕ ಪ್ರದರ್ಶ ಹಾಗೂ ರೈತರಿಗೆ ಕೃಷಿ ಬಗ್ಗೆ ಮಾಹಿತಿ, ಮಹಿಳಾ ಸಂಘಗಳಿಂದ ಕರಕುಶಲ ವಸ್ತುಗಳ ಪ್ರದರ್ಶನ ಮಾರಾಟಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಾತ್ರೆಯಲ್ಲಿ ಯಾವುದೇ ಸುಲಿಗೆ, ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.
ರಥೋತ್ಸವದ ವೇಳೆ ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ, ಶಿವರಾಜ ವಕೀಲ, ರಾಜಾ ರಾಮಚಂದ್ರ ನಾಯಕ, ಶರಣಪ್ಪ ನಾಯಕ ಗುಡದಿನ್ನಿ, ನಾಗನಗೌಡ ಪಾಟೀಲ್, ಅರಕೇರಿ ರಾಮಣ್ಣ, ಸಿದ್ದರಾಮಪ್ಪ ನೀರಮಾನ್ವಿ, ನಾಗರಾಜ ನಾಯಕ, ಗೋಪಾಲ ನಾಯಕ, ಈರಣ್ಣ ಮರ್ಲಟ್ಟಿ, ಬಸನಗೌಡ ಬೆಟ್ಟದೂರು, ಕರಿಬಸಪ್ಪ, ಹಂಪನಗೌಡ, ತಹಸೀಲ್ದಾರ್ ಮಲ್ಲಿಕಾರ್ಜುನ ಪೂಜಾರಿ, ಕಾರ್ಯದರ್ಶಿ ಚರಣಸಿಂಗ್ ಠಾಕೂರು ಇತರರು ಭಾಗವಹಿಸಿದ್ದರು.