ಮಸ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಮುಂದುವರಿದ ಕಾಮಗಾರಿಗಾಗಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಭೂಮಿ ಪೂಜೆ ನೆರವೇರಿಸಿದರು. ತಹಸೀಲ್ದಾರ್ ಮಂಜುನಾಥ ಭೋಗಾವತಿ, ಟಿಎಚ್‌ಒ ಅಮರೇಶ ಪಾಟೀಲ್, ಎಪಿಎಂಸಿ ಅಧ್ಯಕ್ಷ ಸಿದ್ದನಗೌಡ ಮಾಟೂರು, ಜಿಪಂ ಮಾಜಿ ಸದಸ್ಯ ಎಚ್.ಬಿ.ಮುರಾರಿ, ಪ್ರಾಕೃಪಸ ಸಂಘದ ಅಧ್ಯಕ್ಷ ನಾಗಭೂಷಣ ಬಾರಿಕೇರ್ ಇತರರಿದ್ದರು.
- ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿಕೆ
- ಮಸ್ಕಿ ಆಸ್ಪತ್ರೆ ಕಾಮಗಾರಿ ಭೂಮಿ ಪೂಜೆ
ಮಸ್ಕಿ: ಭೂ ವಿವಾದದಿಂದ ಸ್ಥಗಿತಗೊಂಡಿದ್ದ 30 ಹಾಸಿಗೆಗಳ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿದ್ದು, ಕಟ್ಟಡ ಪೂರ್ಣಗೊಳಿಸಲು ಸರ್ಕಾರ 2.84 ಕೋಟಿ ರೂ.ಬಿಡುಗಡೆ ಮಾಡಿದೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ತಿಳಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಮುಂದುವರಿದ ಕಾಮಗಾರಿಗಾಗಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಪಟ್ಟಣದ ಹಿರಿಯ ನಾಗರಿಕ ಕೆ.ವೀರನಗೌಡ ಅವರು ಸಾರ್ವಜನಿಕರಿಗೆ ಅನುಕೂಲವಾಗಲು 4 ಎಕರೆ ಭೂಮಿ ದಾನ ನೀಡಿದ್ದಾರೆ. ಆಸ್ಪತ್ರೆಗೆ ಹಿರಿಯರ ಹೆಸರಿಡುವುದು ಅವರ ಆಶಯವಾಗಿತ್ತು. ಆದರೆ, ಮಾಜಿ ಶಾಸಕರು ಭೂದಾನಿಗಳ ಆಶಯ ಈಡೇರಿಸದ ಕಾರಣ ಅವರು ಕೋರ್ಟ್‌ನಿಂದ ತಡೆ ತಂದಿದ್ದರಿಂದ ಕಟ್ಟಡ ಪೂರ್ಣಗೊಳಿಸಲು ವಿಳಂಬವಾಗಿತ್ತು. ಆದರೆ, ಹಿಂದಿನ ಜಿಲ್ಲಾಧಿಕಾರಿ ಕೆ.ನಿತೀಶ ಅವರು ವಿಶೇಷ ಆಸಕ್ತಿವಹಿಸಿ ಇದಕ್ಕಿರುವ ಅಡೆತಡೆ ನಿವಾರಿಸಿದ್ದಾರೆ ಎಂದ ಅವರು, ಇನ್ನು ಆರು ತಿಂಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ತಹಸೀಲ್ದಾರ್ ಮಂಜುನಾಥ ಭೋಗಾವತಿ, ಟಿಎಚ್‌ಒ ಅಮರೇಶ ಪಾಟೀಲ್, ಎಪಿಎಂಸಿ ಅಧ್ಯಕ್ಷ ಸಿದ್ದನಗೌಡ ಮಾಟೂರು, ಜಿಪಂ ಮಾಜಿ ಸದಸ್ಯ ಎಚ್.ಬಿ.ಮುರಾರಿ, ಪ್ರಾಕೃಪಸ ಸಂಘದ ಅಧ್ಯಕ್ಷ ನಾಗಭೂಷಣ ಬಾರಿಕೇರ್ ಮಾತನಾಡಿದರು. ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಮಹಿಬೂಬ್‌ಸಾಬ್ ಮುದ್ದಾಪುರ, ಪ್ರಮುಖರಾದ ವೆಂಕಟರಡ್ಡಿ ಹಾಲಾಪುರ, ಅಂದಾನಪ್ಪ ಗುಂಡಳ್ಳಿ, ಸೂಗಪ್ಪ ಮರಳದ, ಮಲ್ಲಯ್ಯ ಬಳ್ಳಾ, ಹನುಮಂತಪ್ಪ ವೆಂಕಟಾಪುರ, ಕೃಷ್ಣ ಚಿಗರಿ ಇತರರಿದ್ದರು.
ಅಕ್ರಮ ಬಹಿರಂಗಪಡಿಸಲು ಸವಾಲು: ನಾನು ಮಸ್ಕಿ ಕ್ಷೇತ್ರದಲ್ಲಿ ಇಸ್ಪೀಟು, ಮರಳು ಅಕ್ರಮ ದಂಧೆ, ಕ್ಲಬ್ ನಡೆಸುತ್ತಿದ್ದೇನೆಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಅವರು ಯಾವ ದೇವರ ಮೇಲೆ ಆಣೆ ಮಾಡಲು ಹೇಳುತ್ತಾರೋ ನಾನು ಆಣೆ ಮಾಡುತ್ತೇನೆ. ಅವರೂ ಪ್ರಮಾಣ ಮಾಡಲಿ. ಮಸ್ಕಿ ಪಟ್ಟಣದಲ್ಲಿ ತಲೆ ಎತ್ತಿರುವ ಕ್ಲಬ್ ಯಾರದ್ದು ? ಮದ್ಯ ಅಕ್ರಮ ಸರಬರಾಜು ಮಾಡುತ್ತಿರುವವರು ಯಾರು ? ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.