ದೇವದುರ್ಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹಕ್ಕುಪತ್ರ ಅವಕಾಶ ವಂಚಿತರಿಂದ ಬೃಹತ್ ಪ್ರತಿಭಟನಾ ನಡೆಸಲಾಯಿತು. ರಾಜ್ಯ ಸಂಚಾಲಕ ಹನುಮಂತಪ್ಪ ಕಾಕರಗಲ್, ಪ್ರಮುಖರಾದ ಶಿವಪ್ಪ ಪಲಕನಮರಡಿ, ಶಿವರಾಜ ಗಣಜಿಲಿ ಯೇಸು, ನಾಗರಾಜ ಭೇರಿ, ಬಸವರಾಜ್ ರಾಮದುರ್ಗ, ಚನ್ನಬಸವ, ರಾಮಪ್ಪ, ರಂಗಣ್ಣ ನಾಯಕ ಇತರರಿದ್ದರು.
- ಬಗರ್‌ಹುಕುಂ
- ಭೂಮಿ ಹಕ್ಕು
- ಭೂಮಿ ಸಾಗುವಳಿ
ಬಗರ್‌ಹುಕುಂ ಸಾಗುವಳಿ ಸಕ್ರಮಗೊಳಿಸಿ
ದೇವದುರ್ಗ: ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕು ಹಾಗೂ ವಸತಿ, ನಿವೇಶನ ನೀಡಲು ಒತ್ತಾಯಿಸಿ ಪಟ್ಟಣದಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹಕ್ಕುಪತ್ರ ಅವಕಾಶ ವಂಚಿತರಿಂದ ಪ್ರತಿಭಟನಾ ರ‌್ಯಾಲಿ ನಡೆಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಆಡಳಿತ ಸೌಧದವರೆಗೆ ಬೃಹತ್ ರ‌್ಯಾಲಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆ ಸೇರಿ ರಾಜ್ಯಾದ್ಯಂತ ಹಲವು ವರ್ಷಗಳಿಂದ ಬಡವರು, ದಲಿತರು ಬಗರ್ ಹುಕುಂ ಭೂಮಿಯಲ್ಲಿ ಒಕ್ಕಲುತನ ಮಾಡುತ್ತಿದ್ದಾರೆ. ಭೂಮಿ ಹಕ್ಕಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಹಕ್ಕುಪತ್ರ ನೀಡದೆ ಚೆಲ್ಲಾಟವಾಡುತ್ತಿದ್ದು, ರೈತರು ನೆಮ್ಮದಿ ಕಳೆದುಕೊಂಡಿದ್ದಾರೆ. ಭೂ ರಹಿತ ಬಡವರು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಯನ್ನು ಹಾಗೂ ಅರಣ್ಯ ಹಕ್ಕು ಕಾಯ್ದೆ 1980ರಡಿ ಅರಣ್ಯ ಭೂಮಿ ಸಾಗುವಳಿಯನ್ನು ಸಕ್ರಮಗೊಳಿಸಬೇಕು. ಪುರಸಭೆಯ 3 ಕಿ.ಮೀ ವ್ಯಾಪ್ತಿಗೆ ಹಾಕಿರುವ ಮಿತಿಯನ್ನು ತೆಗೆದು ಎಲ್ಲ ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿ ವಾಸಿಸುತ್ತಿರುವ ಕುಟುಂಬಗಳನ್ನು ಸಕ್ರಮಗೊಳಿಸಿ 94 ಸಿ ಮತ್ತು 94 ಸಿಸಿ ಅಡಿಯಲ್ಲಿ ಹಕ್ಕುಪತ್ರ ನೀಡಬೇಕು. ನಿವೇಶನ ಕೋರಿ ಗ್ರಾಪಂಗೆ ಅರ್ಜಿ ಸಲ್ಲಿಸಿದ ವಸತಿ ರಹಿತ ಬಡವರಿಗೆ ಭೂಮಿ ಗುರುತಿಸಿ ನಿವೇಶನ ನೀಡಿ ಜೀವನ ಭದ್ರತೆ ಒದಗಿಸಬೇಕು. ಜತೆಗೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಸಮಿತಿ ರಾಜ್ಯ ಸಂಚಾಲಕ ಹನುಮಂತಪ್ಪ ಕಾಕರಗಲ್, ಪ್ರಮುಖರಾದ ಶಿವಪ್ಪ ಪಲಕನಮರಡಿ, ಶಿವರಾಜ ಗಣಜಿಲಿ, ಯೇಸು, ನಾಗರಾಜ ಭೇರಿ, ಬಸವರಾಜ್ ರಾಮದುರ್ಗ, ಚನ್ನಬಸವ, ರಾಮಪ್ಪ, ರಂಗಣ್ಣ ನಾಯಕ, ಭೀಮಣ್ಣ, ಹೈದರ್ ಅಲಿ ಪಲಕನಮರಡಿ, ತಿರುಮಂದೆಪ್ಪ, ನಿಂಗಣ್ಣ ಗೋನಾಳ, ರಮೇಶ ಗೋಸಲ್, ಹನುಮಂತಪ್ಪ, ಚನ್ನಮ್ಮ, ಲಕ್ಷ್ಮೀ, ನಾಗಮ್ಮ ಇತರರಿದ್ದರು.