ಸಿಂಧನೂರಿನಲ್ಲಿ ಶಾಸಕ ಹಂಪನಗೌಡ ಬಾದರ್ಲಿಗೆ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದಿಂದ ಮನವಿ ಸಲ್ಲಿಸಲಾಯಿತು. ವಿಭಾಗೀಯ ಅಧ್ಯಕ್ಷ ವಾದಿರಾಜ, ತಾಲೂಕು ಅಧ್ಯಕ್ಷ ವೀರೇಶ, ಕಾರ್ಯದರ್ಶಿ ದೇವೇಂದ್ರ, ಉಪಾಧ್ಯಕ್ಷ ವೆಂಕಟೇಶ, ಹುಸೇನ್ ಸಾಬ್ ಆದಪ್ಪ ಇತರರಿದ್ದರು.
ತುಂಗಭದ್ರಾ ನೀರಾವರಿ ಯೋಜನೆಯಡಿ 25ರಿಂದ 30 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದಿಂದ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಎಂಎಲ್‌ಸಿ ಬಸನಗೌಡ ಬಾದರ್ಲಿಗೆ ಮನವಿ ಸಲ್ಲಿಸಲಾಯಿತು.
ತುಂಗಭದ್ರಾ ನೀರಾವರಿ ಯೋಜನೆ ಕಾಲುವೆಗಳ ನಿರ್ವಹಣೆ, ನೀರು ಹರಿಸುವುದು, ಕಾಲುವೆಗಳ ರಕ್ಷಣೆ, ದುರಸ್ತಿ ಸೇರಿದಂತೆ ಹಲವು ಪ್ರಮುಖ ಕಾರ್ಯಗಳನ್ನು ಕಾರ್ಮಿಕರು ನಿರ್ವಹಿಸುತ್ತಿದ್ದಾರೆ. ಆದರೂ, ಕಾರ್ಮಿಕರಿಗೆ ಉದ್ಯೋಗ ಭದ್ರತೆ, ನೇರ ವೇತನ ಪಾವತಿ ದೊರೆಯದೆ ಗುತ್ತಿಗೆ ಪದ್ಧತಿಯಡಿ ಕೆಲಸ ಮಾಡಿಸಲಾಗುತ್ತಿದೆ ಎಂದು ದೂರಲಾಯಿತು.
ಕಲಂ 371(ಜೆ) ಅಡಿ ತುಂಗಭದ್ರಾ ನೀರಾವರಿ ಕಾರ್ಮಿಕರ ಉದ್ಯೋಗ ಮತ್ತು ಸೇವಾ ಭದ್ರತೆ ಸಮಸ್ಯೆಯನ್ನು ವಿಶೇಷವಾಗಿ ಪರಿಗಣಿಸಬೇಕು. ಬೇಡಿಕೆಗಳನ್ನು ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕು. ಆ.19ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ತುಂಗಭದ್ರಾ ನೀರಾವರಿ ಕಾರ್ಮಿಕರ ಪ್ರತಿಭಟನೆಗೆ ಬೆಂಬಲ ನೀಡಬೇಕು ಎಂದು ಆಗ್ರಹಿಸಲಾಯಿತು.