ಜಾಲಹಳ್ಳಿಯಲ್ಲಿ ನಾಡಕಚೇರಿ ತಹಸೀಲ್ದಾರ್ ಗೋವಿಂದ ನಾಯಕಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ ಸಲ್ಲಿಸಿತು.  
ರಾಯಚೂರು

ಗ್ರಾಮೀಣ ಭಾಗಕ್ಕೆ ಮೂಲಸೌಲಭ್ಯ ಕಲ್ಪಿಸಿ

ನರೇಶ್ ಕುಮಾರ್
ದೇವದುರ್ಗ: ಗ್ರಾಮೀಣ ಭಾಗಕ್ಕೆ ಮೂಲಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಜಾಲಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.
ಜಾಲಹಳ್ಳಿ, ಚಿಂಚೋಡಿ, ಕರಡಿಗುಡ್ಡಿ ಸೇರಿ ಗ್ರಾಮೀಣ ಭಾಗದಲ್ಲಿ ಮೂಲಸೌಲಭ್ಯಗಳಿಲ್ಲದೆ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಶುದ್ಧ ಕುಡಿವ ನೀರು, ರಸ್ತೆ, ಚರಂಡಿ ವ್ಯವಸ್ಥೆ, ದಲಿತರು ಸೇರಿ ಬಡವರಿಗೆ ನಿವೇಶನ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸದೆ ನಿರ್ಲಕ್ಷೃವಹಿಸುತ್ತಿದ್ದಾರೆ. ಬಡವರು ಸರ್ಕಾರಿ ಜಮೀನಿನಲ್ಲಿ ವಾಸ ಮಾಡುತ್ತಿದ್ದು ಹಕ್ಕುಪತ್ರ ಇಲ್ಲದೆ ಅಭದ್ರತೆ ಎದುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಗ್ರಾಮೀಣ ಭಾಗಕ್ಕೆ ಗುಣಮಟ್ಟದ ರಸ್ತೆ, ಶುದ್ಧ ಕುಡಿವ ನೀರು ಕಲ್ಪಿಸಬೇಕು. ಸ್ವಚ್ಛತೆ ಕಾಪಾಡಬೇಕು. ಸರ್ಕಾರಿ ಜಾಗದಲ್ಲಿ ವಾಸಿಸುವ ದಲಿತರು ಸೇರಿ ಬಡವರಿಗೆ ಹಕ್ಕುಪತ್ರ ನೀಡಬೇಕು. ನಿವೇಶನ ರಹಿತ ಬಡವರಿಗೆ ಮನೆ ನಿರ್ಮಿಸಿಕೊಡಬೇಕು.
ಸರ್ಕಾರಿ ಜಮೀನು ಉಳಿಮೆ ಮಾಡುವ ರೈತರಿಗೆ ಹಕ್ಕುಪತ್ರ ನೀಡಬೇಕು. ಹಳ್ಳಿಗಳಿಗೆ ರುದ್ರಭೂಮಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ನಾಡಕಚೇರಿ ತಹಸೀಲ್ದಾರ್ ಗೋವಿಂದ ನಾಯಕಗೆ ಮನವಿ ಸಲ್ಲಿಸಿದರು. 
ಮುಖಂಡರಾದ ಹನುಮಂತಪ್ಪ ಕಾಕರಗಲ್, ಶಿವಪ್ಪ ಪಲಕನಮರಡಿ, ನಾಗರಾಜ ಅರಕೇರಾ, ಶಿವರಾಜ ಕೋರಿ, ರಮೇಶ ಬಾವಿಮನಿ, ಬೂದೆಪ್ಪ ಗಬ್ಬೂರು ಇತರರಿದ್ದರು.